ADVERTISEMENT

ಕೊರೊನಾಗೆ ಕನಿಷ್ಠ 40 ಮಂದಿ ಭಾರತೀಯ–ಅಮೆರಿಕನ್ನರು ಬಲಿ; 1,500 ಜನರಿಗೆ ಸೋಂಕು

ಏಜೆನ್ಸೀಸ್
Published 11 ಏಪ್ರಿಲ್ 2020, 16:00 IST
Last Updated 11 ಏಪ್ರಿಲ್ 2020, 16:00 IST
ಅಮೆರಿಕದ ನ್ಯೂ ಜೆರ್ಸಿ ನಗರ
ಅಮೆರಿಕದ ನ್ಯೂ ಜೆರ್ಸಿ ನಗರ    

ವಾಷಿಂಗ್ಟನ್: ಜಗತ್ತಿನ ಕೊರೊನಾ ವೈರಸ್‌ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿರುವ ಅಮೆರಿಕದಲ್ಲಿ ಕೋವಿಡ್‌–19ನಿಂದ ಈವರೆಗೂ 40 ಮಂದಿ ಭಾರತೀಯ–ಅಮೆರಿಕನ್ನರು ಸಾವಿಗೀಡಾಗಿದ್ದಾರೆ. ಸುಮಾರು 1,500 ಜನರಲ್ಲಿಕೊರೊನಾ ಸೋಂಕು ದೃಢಪಟ್ಟಿದೆ.

ಒಂದೇ ದಿನ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ 2,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ 24 ಗಂಟೆಗಳಲ್ಲಿ ಕೋವಿಡ್‌–19ಗೆ ಬಲಿಯಾದ ಪ್ರಕರಣಗಳು ಎರಡು ಸಾವಿರ ದಾಟಿದೆ. ಒಂದೇ ದಿನ 2,108 ಮಂದಿ ಸಾವಿಗೀಡಾಗಿದ್ದು, ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 5,00,000 ದಾಟಿರುವುದಾಗಿ ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಮಾಹಿತಿಯಿಂದ ತಿಳಿದು ಬಂದಿದೆ.

ನ್ಯೂಯಾರ್ಕ್‌ ಅಮೆರಿಕದ ಕೊರೊನಾ ಸೋಂಕಿನ ಕೇಂದ್ರವಾಗಿ ಪರಿಣಮಿಸಿದೆ. ಅತಿ ಹೆಚ್ಚು ಭಾರತೀಯ–ಅಮೆರಿಕನ್ನರು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ವಾಸವಿದ್ದು, ಸೋಂಕಿನಿಂದ ಸಾವಿಗೀಡಾಗುತ್ತಿರುವ ಪ್ರಕರಣಗಳು ಈ ಭಾಗಗಳಲ್ಲಿ ಏರಿಕೆಯಾಗುತ್ತಿವೆ.

ADVERTISEMENT

ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾವಿಗೀಡಾಗಿರುವ ಭಾರತೀಯ–ಅಮೆರಿಕನ್ನರಲ್ಲಿ ಕೇರಳ ಮೂಲದ 17 ಮಂದಿ, ಗುಜರಾತ್‌ನ 10 ಜನ, ಪಂಜಾಬ್‌ನ ನಾಲ್ವರು, ಆಂಧ್ರ ಪ್ರದೇಶದ ಇಬ್ಬರು ಹಾಗೂ ಒಡಿಶಾದ ಒಬ್ಬ ವ್ಯಕ್ತಿ ಸೇರಿದ್ದಾರೆ. ಇವರಲ್ಲಿ ಬಹುತೇಕರು 60 ವರ್ಷ ವಯಸ್ಸಿಗಿಂತಲೂ ಹೆಚ್ಚಿನವರು ಹಾಗೂ ಒಬ್ಬರು 21 ವರ್ಷ ವಯಸ್ಸಿನವರು.

ನ್ಯೂಯಾರ್ಕ್‌ನಲ್ಲಿ 15 ಮಂದಿ ಭಾರತೀಯ–ಅಮೆರಿಕನ್ನರು, ನ್ಯೂಜೆರ್ಸಿಯಲ್ಲಿ 12ಕ್ಕೂ ಹೆಚ್ಚು ಜನರು, ಕ್ಯಾಲಿಫೋರ್ನಿಯಾ, ಟೆಕ್ಸಾಸ್‌, ಫ್ಲೋರಿಡಾ ಹಾಗೂ ಪೆನ್ಸಿಲ್ವೇನಿಯಾದಲ್ಲಿ ತಲಾ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.