ADVERTISEMENT

ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕ: ಮೃತರ ಸಂಖ್ಯೆ 106ಕ್ಕೆ ಏರಿಕೆ

ಈವರೆಗೆ 4,515 ಜನರಿಗೆ ಸೋಂಕು

ಪಿಟಿಐ
Published 28 ಜನವರಿ 2020, 4:31 IST
Last Updated 28 ಜನವರಿ 2020, 4:31 IST
ಚೀನಾದ ವುಹಾನ್‌ ನಗರದ ರೆಡ್‌ಕ್ರಾಸ್ ಆಸ್ಪತ್ರೆಯ ಚಿತ್ರ
ಚೀನಾದ ವುಹಾನ್‌ ನಗರದ ರೆಡ್‌ಕ್ರಾಸ್ ಆಸ್ಪತ್ರೆಯ ಚಿತ್ರ   

ಬೀಜಿಂಗ್:ಚೀನಾದಲ್ಲಿಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಮೃತಪಟ್ಟವರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. 1,300 ಜನರಿಗೆ ಸೋಂಕು ತಗುಲಿರುವುದು ಹೊಸದಾಗಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕು ತಗುಲಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಒಂದೇ ದಿನದಲ್ಲಿ 24ಕ್ಕೂ ಹೆಚ್ಚು ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಚೀನಾದ ಹುಬೆಯಿ ಪ್ರಾಂತ್ಯದ ಆಡಳಿತ ತಿಳಿಸಿದೆ. ಈ ಪ್ರಾಂತ್ಯದ ವುಹಾನ್ ನಗರದಲ್ಲಿ ಸೋಂಕು ಮೊದಲು ಪತ್ತೆಯಾಗಿತ್ತು.

ಒಟ್ಟಾರೆಯಾಗಿ ಸುಮಾರು 4,515 ಜನರಿಗೆ ಸೋಂಕು ತಗುಲಿರುವುದು ಈವರೆಗೆ ದೃಢಪಟ್ಟಿದೆ. 60 ಮಂದಿಯನ್ನು ವೈದ್ಯಕೀಯ ತಪಾಸಣೆಯ ಬಳಿಕ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ಚೀನಾ ಸರ್ಕಾರ ತಿಳಿಸಿದೆ.

ADVERTISEMENT

ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ವುಹಾನ್‌ ನಗರಕ್ಕೆ ಪ್ರಧಾನಿ ಲಿ ಕೆಕಿಯಾಂಗ್‌ ಸೋಮವಾರ ಭೇಟಿ ನೀಡಿ, ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಕಾರ್ಯಗಳನ್ನು ಪರಿಶೀಲಿಸಿದ್ದರು. ಇದರ ಬೆನ್ನಲ್ಲೇ ಚೀನಾ ಸರ್ಕಾರವು ಕೊರೊನಾ ನಿಯಂತ್ರಣಕ್ಕೆ ₹ 62,000 ಕೋಟಿ ಬಿಡುಗಡೆ ಮಾಡಿತ್ತು.

ಈ ಮಧ್ಯೆ, ಚೀನಾದಲ್ಲಿರುವ ಭಾರತೀಯರ ರಕ್ಷಣೆಗೆ ಮುಂದಾಗಿರುವ ಭಾರತ ಸರ್ಕಾರ ಅವರನ್ನು ಕರೆತರಲು ವಿಮಾನ ವ್ಯವಸ್ಥೆ ಮಾಡಲು ಮುಂದಾಗಿದೆ. ‘ಚೀನಾದ ವುಹಾನ್‌ ಮತ್ತು ಹುಬೇ ಪ್ರಾಂತ್ಯದಿಂದ 250 ಭಾರತೀಯರನ್ನು ಕರೆತರಲು ಸರ್ಕಾರ ನಿರ್ಧರಿಸಿದೆ.ವುಹಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರೆಡೆ ಇರುವ ಭಾರತೀಯರ ಜೊತೆಗೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸಂಪರ್ಕದಲ್ಲಿದೆ. ಇವರನ್ನು ಒಂದೆಡೆ ಸೇರಿಸುವ ಕೆಲಸ ಶೀಘ್ರವೇ ಆರಂಭವಾಗಲಿದ್ದು, ಬಳಿಕ ವಿಮಾನದಲ್ಲಿ ತ್ವರಿತವಾಗಿ ಕರೆತರಲಾಗುವುದು’ ಮೂಲಗಳು ಸೋಮವಾರವೇ ತಿಳಿಸಿದ್ದವು.

ದೆಹಲಿಯಲ್ಲಿ ಮೂವರ ಮೇಲೆ ನಿಗಾ

ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಮೂವರನ್ನು ಕೊರೊನಾ ವೈರಸ್‌ ಶಂಕೆಯಿಂದ ತಪಾಸಣೆಗೆ ಒಳಪಡಿಸಲಾಗಿದೆ. ಇತರ ರೋಗಿಗಳಿಂದ ಇವರನ್ನು ಪ್ರತ್ಯೇಕಿಸಲಾಗಿದ್ದು, ನಿಗಾವಣೆಯಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.