ADVERTISEMENT

ಕೋವಿಡ್‌ ಏರುಗತಿಯಲ್ಲಿದ್ದರೂ ಶಾಲೆ ಆರಂಭಿಸಲು ಮುಂದಾದ ಫ್ರಾನ್ಸ್‌ ಸರ್ಕಾರ

ಏಜೆನ್ಸೀಸ್
Published 29 ಆಗಸ್ಟ್ 2020, 6:40 IST
Last Updated 29 ಆಗಸ್ಟ್ 2020, 6:40 IST
ಸ್ಪೇನ್‌ನ ವಲ್ಲಾಡೋಲಿಡ್‌ನ ಶಾಲೆಯೊಂದರಲ್ಲಿ ಫೇಸ್‌ ಮಾಸ್ಕ್‌ ಧರಿಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ಶಿಕ್ಷಕರು (ಸಂಗ್ರಹ ಚಿತ್ರ)
ಸ್ಪೇನ್‌ನ ವಲ್ಲಾಡೋಲಿಡ್‌ನ ಶಾಲೆಯೊಂದರಲ್ಲಿ ಫೇಸ್‌ ಮಾಸ್ಕ್‌ ಧರಿಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ಶಿಕ್ಷಕರು (ಸಂಗ್ರಹ ಚಿತ್ರ)    

ಪ್ಯಾರಿಸ್‌: ಫ್ರಾನ್ಸ್‌ನಲ್ಲಿ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಹೊತ್ತಿನಲ್ಲೇ ಶಾಲೆಗಳನ್ನು ಆರಂಭಿಸಲುಅಲ್ಲಿನ ಸರ್ಕಾರವು ನಿರ್ಧರಿಸಿದೆ.

1.29 ಕೋಟಿ ವಿದ್ಯಾರ್ಥಿಗಳು ಮಂಗಳವಾರದಿಂದ ತರಗತಿಗಳಿಗೆ ಮರಳಲಿದ್ದಾರೆ ಎಂದು ಅಲ್ಲಿನ ಸರ್ಕಾರವು ಹೇಳಿದೆ. ಜೊತೆಗೆ ಪ್ರಸಿದ್ಧ ‘ಟೂರ್‌ ಡಿ ಫ್ರಾನ್ಸ್‌’ ವೃತ್ತಿ‍ಪರ ಸೈಕ್ಲಿಂಗ್‌ ರೇಸ್‌ಗೂ ಶನಿವಾರ ಹಸಿರು ನಿಶಾನೆ ತೋರಲಾಗಿದೆ. ಈ ರೇಸ್‌ ಮೂರು ವಾರಗಳ ಕಾಲ ನಡೆಯಲಿದೆ.

ಫ್ರಾನ್ಸ್‌ನಲ್ಲಿ ಶುಕ್ರವಾರ ಏಳು ಸಾವಿರಕ್ಕೂ ಅಧಿಕ ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಲಕ್ಷ ಮಂದಿಯ ಪೈಕಿ 30 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ತಿಂಗಳ ಹಿಂದೆ ಈ ಸಂಖ್ಯೆಯು ಒಂದಂಕಿ ದಾಟಿರಲಿಲ್ಲ.

ADVERTISEMENT

‘ಕೊರೊನಾ ಸೋಂಕು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಬಗೆಯ ಕ್ರಮಗಳನ್ನು ನಾವು ತೆಗೆದುಕೊಳ್ಳಲಿದ್ದೇವೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕತೆಗೆ ಪೆಟ್ಟು ಬಿದ್ದಿದ್ದು, ಈಗ ಅದನ್ನು ಪುನಃಶ್ಚೇತನಗೊಳಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಮಂಗಳವಾರದಿಂದ ಎಲ್ಲರೂ ಕೆಲಸಕ್ಕೆ ಮರಳಲಿದ್ದಾರೆ’ ಎಂದು ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಶುಕ್ರವಾರ ತಿಳಿಸಿದ್ದಾರೆ.

ಕೊರೊನಾ ಸೋಂಕು ಪಸರಿಸುವಿಕೆಯನ್ನು ತಡೆಯುವ ಉದ್ದೇಶದಿಂದ ಬ್ರಿಟನ್‌, ಜರ್ಮನಿ ಮತ್ತು ಬೆಲ್ಜಿಯಂ ಸೇರಿದಂತೆ ಯುರೋಪ್‌ ರಾಷ್ಟ್ರಗಳು ತಮ್ಮ ಗಡಿಗಳನ್ನು ಮುಚ್ಚಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಮ್ಯಾಕ್ರನ್‌ ‘ಗಡಿಗಳನ್ನು ಮುಚ್ಚುವುದರಲ್ಲಿ ಅರ್ಥವಿಲ್ಲ. ಕೆಲಸದ ನಿಮಿತ್ತ ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ಪ್ರಯಾಣ ಮಾಡುವವರಿಗೆ ಇದರಿಂದ ತೊಂದರೆಯಾಗಲಿದೆ. ಎಲ್ಲರೂ ಒಂದಾಗಿ ಕೋವಿಡ್‌ ಪಿಡುಗಿನ ವಿರುದ್ಧ ಹೋರಾಡಬೇಕು’ ಎಂದಿದ್ದಾರೆ.

‘ಉತ್ಪಾದನಾ ವಲಯವನ್ನು ಉತ್ತೇಜಿಸುವ ಹಾಗೂ ಹೊಸದಾಗಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ₹1 ಲಕ್ಷ ಕೋಟಿಗೂ ಅಧಿಕ ಬಂಡವಾಳ ಹೂಡುವ ಯೋಚನೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.