ADVERTISEMENT

ಚೀನಾದಲ್ಲಿ ಕೋವಿಡ್ ಉಲ್ಬಣ: ಒಂದೇ ತಿಂಗಳಲ್ಲಿ 60 ಸಾವಿರ ಸೋಂಕಿತರು ಸಾವು

ಏಜೆನ್ಸೀಸ್
Published 14 ಜನವರಿ 2023, 11:28 IST
Last Updated 14 ಜನವರಿ 2023, 11:28 IST
ಎಪಿ/ಪಿಟಿಐ ಚಿತ್ರ
ಎಪಿ/ಪಿಟಿಐ ಚಿತ್ರ   

ಬೀಜಿಂಗ್‌: ಕೋವಿಡ್‌ ನಿಯಂತ್ರಣದ ಸಲುವಾಗಿ ಜಾರಿಗೊಳಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ಹಿಂಪಡೆದ ಬಳಿಕ ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಏರಿಕೆ ಕಂಡಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 60 ಸಾವಿರ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಆಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

2022ರ ಡಿಸೆಂಬರ್‌ 8ರಿಂದ 2023ರ ಜನವರಿ 12ರ ಅವಧಿಯಲ್ಲಿ ಕೋವಿಡ್‌ ಸಂಬಂಧಿತ 59,938 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಅಡಿಯಲ್ಲಿ ಕಾರ್ಯಾಚರಿಸುವ ವೈದ್ಯಕೀಯ ಆಡಳಿತ ಮಂಡಳಿಯ ಮುಖ್ಯಸ್ಥ ಜಿಯಾವೊ ಯಾಹೈ ಅವರು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿರುವ ಬಹುತೇಕ ಜನರಿಗೆ ಈ ತಿಂಗಳ ಅಂತ್ಯದ ವೇಳೆಗೆ ಕೋವಿಡ್‌ ತಗುಲುತ್ತದೆ ಎಂದು 'ನೇಚರ್‌ ಮೆಡಿಸಿನ್‌' ನಿಯತಕಾಲಿಕೆ ಅಧ್ಯಯನ ವರದಿ ಬಿಡುಗಡೆ ಮಾಡಿದೆ.

ADVERTISEMENT

ಸೋಂಕು ನಿಯಂತ್ರಣ ಸಲುವಾಗಿ ದೇಶದಾದ್ಯಂತ ಜಾರಿಗೊಳಿಸಿದ್ದ ಕಠಿಣ ನಿರ್ಬಂಧಗಳ ವಿರುದ್ಧ ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ನಿರ್ಬಂಧಗಳನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಸಡಿಲಿಸಲಾಗಿತ್ತು. 'ಶೂನ್ಯ ಕೋವಿಡ್‌ ನೀತಿ'ಯನ್ನೂ ಡಿಸೆಂಬರ್‌ನಲ್ಲಿ ಹಿಂಪಡೆಯಲಾಗಿತ್ತು. ಇದಾದ ಬಳಿಕ ಸೋಂಕು ತೀವ್ರವಾಗಿ ಹರಡುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ತಗುಲುವ ಪ್ರಮಾಣವೂ ಏರಿಕೆಯಾಗಿದೆ. ಸದ್ಯ ಒಬ್ಬ ಸೋಂಕಿತನಿಂದ ಸರಾಸರಿ 3.44 ಮಂದಿಗೆ ಸೋಂಕು ತಗುಲುವ ಸಾಧ್ಯತೆ ಇದೆ. ಬೀಜಿಂಗ್‌ನ ಶೇ 92ರಷ್ಟು ಜನರು ಈ ತಿಂಗಳ ಅಂತ್ಯದ ವೇಳೆಗೆ ಕೋವಿಡ್‌ಗೆ ತುತ್ತಾಗಲಿದ್ದಾರೆ. ಕಳೆದ ವರ್ಷ ಡಿಸೆಂಬರ್ 22ರ ಹೊತ್ತಿಗೆ ಶೇ 76 ರಷ್ಟು ಜನರಿಗೆ ಸೋಂಕು ದೃಢಪಟ್ಟಿದೆ. ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.