ADVERTISEMENT

Covid19 World Update| ವೈರಾಣು ಮೂಲ ಚೀನಾದಲ್ಲೀಗ ನೂರಕ್ಕಿಂತ ಕಡಿಮೆ ಸೋಂಕಿತರು

ಏಜೆನ್ಸೀಸ್
Published 24 ಮೇ 2020, 17:08 IST
Last Updated 24 ಮೇ 2020, 17:08 IST
ಚೀನಾದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ
ಚೀನಾದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ    

ಕೊರೊನಾ ವೈರಸ್‌ನ ಮೂಲ ಚೀನಾದಲ್ಲಿ ಈಗ ಇರುವ ಸಕ್ರೀಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಎಷ್ಟು ಗೊತ್ತೇ? ಕೇವಲ 79 ಮಾತ್ರ. ಆ ಪೈಕಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ.

ಚೀನಾದಲ್ಲಿ ಹೊಸ ಸೋಂಕು ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗುತ್ತಿವೆ. ಶನಿವಾರವಂತೂ ಅಲ್ಲಿ ಒಂದೇ ಒಂದು ಸೋಂಕು ಪ್ರಕರಣವೂ ವರದಿಯಾಗಿರಲಿಲ್ಲ. ಕೊರೊನಾ ವೈರಸ್‌ ಕಾಣಿಸಿಕೊಂಡ ನಂತರದಲ್ಲಿ ಒಂದೇ ಒಂದು ಪ್ರಕರಣ ಕಾಣಿಸಿಕೊಳ್ಳದೇ ಇದ್ದದ್ದು ಚೀನಾದಲ್ಲಿ ಶನಿವಾರವೇ ಮೊದಲು.ಕೊರೊನಾ ಸೋಂಕು ಪತ್ತೆ ಪರೀಕ್ಷೆಯನ್ನು ಚೀನಾ ವ್ಯಾಪಕವಾಗಿ ನಡೆಸುತ್ತಿದೆ.

ಇನ್ನು ಅಮೆರಿಕ ಸೋಂಕಿತರ ಸಂಖ್ಯೆಯಲ್ಲಿ ಅಗ್ರ ಸ್ಥಾನದಲ್ಲೇ ಉಳಿದಿದೆ. ಈಗ ಅಲ್ಲಿ 16,26,270 ಮಂದಿ ಸೋಂಕಿತರಿದ್ದಾರೆ. ಬ್ರೆಜಿಲ್‌ ವಿಶ್ವದ ಕೋವಿಡ್‌ ಕೇಂದ್ರವಾಗಿ ಹೊರಹೊಮ್ಮಿದ್ದು, ರಷ್ಯಾವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದೆ. ಅಲ್ಲೀಗ 3,47,398 ಮಂದಿ ಸೋಂಕಿತರಿದ್ದಾರೆ.

ADVERTISEMENT

ಇನ್ನು ಹೆಚ್ಚು ಸೋಂಕಿತರನ್ನು ಹೊಂದಿರುವ ಅಗ್ರ ಹತ್ತು ದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವತ್ತ ಭಾರತ ದಾಪುಗಾಲಿಟ್ಟಂತೆ ಕಾಣುತ್ತಿದೆ. ಸದ್ಯ ಭಾರತ ಜಾಗತಿಕವಾಗಿ 11ನೇ ಸ್ಥಾನದಲ್ಲಿದ್ದು, ಇರಾನ್‌ 10ನೇ ಸ್ಥಾನದಲ್ಲಿದೆ. ಇರಾನ್‌ನ ಒಟ್ಟು ಸೋಂಕಿತರ ಸಂಖ್ಯೆ 1,35,701 ಆಗಿದ್ದರೆ, ಭಾರತದ ಒಟ್ಟಾರೆ ಸೋಂಕಿತರ ಸಂಖ್ಯೆ 133,725.

ಇನ್ನು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾನುವಾರ ಅತೀ ಕಡಿಮೆ ಸಾವಿನ ಸಂಖ್ಯೆ ವರದಿಯಾಗಿದೆ. ಭಾನುವಾರ ಅಲ್ಲಿ 84 ಮಂದಿ ಸೋಂಕಿತರು ಸಾವಿಗೀಡಾಗಿದ್ದರು. ಸಾವಿನ ಸಂಖ್ಯೆ ಏ. 8ರಂದು 799ಕ್ಕೆ ತಲುಪಿತ್ತು.

ಶ್ರೀಲಂಕಾ ಚುನಾವಣೆಗೆ ಸಜ್ಜು: ಕೊರೊನಾ ವೈರಸ್‌ನಿಂದಾಗಿ ಸಂಸತ್‌ ಚುನಾವಣೆಯನ್ನು ಎರಡು ತಿಂಗಳು ಮುಂದೂಡಿದ್ದ ಶ್ರೀಲಂಕಾ ಮತ್ತೆ ಚುನಾವಣೆಗೆ ಸಜ್ಜಾಗುತ್ತಿದೆ. ಜೂನ್‌.20 ರಂದು ಅಲ್ಲಿ ಸಂಸತ್‌ ಚುನಾವಣೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ವರೆಗೆ ಅಲ್ಲಿ 1100 ಪ್ರಕರಣಗಷ್ಟೇ ವರದಿಯಾಗಿವೆ.

ಕೊರೊನಾ ವೈರಸ್‌ ಎದುರಿಸಲು ಪಾಕಿಸ್ತಾನಕ್ಕೆ ವಿಶ್ವ ಬ್ಯಾಂಕ್‌ ನೆರವು: ಕೊರೊನಾ ವೈರಸ್‌ನಿಂದ ಜರ್ಜರಿತ ಗೊಂಡಿರುವ ಪಾಕಿಸ್ತಾನಕ್ಕೆ ವಿಶ್ವಬ್ಯಾಂಕ್‌ ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಆರ್ಥಿಕ ನೆರವು ಘೋಷಿಸಿದೆ. 500 ಮಿಲಿಯನ್‌ ಡಾಲರ್‌ಗಳನ್ನು ಕೋವಿಡ್‌ ವಿರುದ್ಧದ ಹೋರಾಟಕ್ಕಾಗಿ ವಿಶ್ವಬ್ಯಾಂಕ್‌ ಪಾಕಿಸ್ತಾನಕ್ಕೆ ನೀಡುತ್ತಿದೆ.

ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ 54,601 ಸೋಂಕಿತರಿದ್ದು, 1,133 ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.