ADVERTISEMENT

ಲಸಿಕೆ ಪಡೆದವರಿಗಷ್ಟೇ ಮೆಕ್ಕಾ, ಮದಿನಾ ಯಾತ್ರೆಗೆ ಅವಕಾಶ: ಸೌದಿ ಅರೇಬಿಯಾ

ಏಜೆನ್ಸೀಸ್
Published 6 ಏಪ್ರಿಲ್ 2021, 3:16 IST
Last Updated 6 ಏಪ್ರಿಲ್ 2021, 3:16 IST
ಮೆಕ್ಕಾ, ಸೌದಿ ಅರೇಬಿಯಾ – ರಾಯಿಟರ್ಸ್ ಸಂಗ್ರಹ ಚಿತ್ರ
ಮೆಕ್ಕಾ, ಸೌದಿ ಅರೇಬಿಯಾ – ರಾಯಿಟರ್ಸ್ ಸಂಗ್ರಹ ಚಿತ್ರ   

ರಿಯಾದ್: ಮೆಕ್ಕಾ, ಮದಿನಾ ಸೇರಿ ಪವಿತ್ರ ಕ್ಷೇತ್ರಗಳ ಯಾತ್ರೆಗೆ ಕೋವಿಡ್ ವಿರುದ್ಧ ಲಸಿಕೆ ಹಾಕಿಸಿಕೊಂಡವರು ಮತ್ತು ಪ್ರತಿಕಾಯಗಳನ್ನು ಹೊಂದಿರುವವರಿಗಷ್ಟೇ ಅವಕಾಶ ನೀಡಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ತಿಳಿಸಿದೆ.

ಪವಿತ್ರ ರಂಜಾನ್ ತಿಂಗಳಿನಿಂದ ಆರಂಭವಾಗುವ ಮೆಕ್ಕಾ, ಮದಿನಾ ಯಾತ್ರೆಗೆ ಕೋವಿಡ್ ವಿರುದ್ಧ ಪ್ರತಿಕಾಯಗಳನ್ನು ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗುವುದು. ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರು, ಮೊದಲ ಡೋಸ್ ಪಡೆದು ಕನಿಷ್ಠ 14 ದಿನ ಪೂರೈಸಿದವರು ಮತ್ತು ಈಗಾಗಲೇ ಕೋವಿಡ್ ಸೋಂಕಿತರಾಗಿ ಗುಣಮುಖರಾದವರನ್ನು ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿದವರು ಎಂದು ಪರಿಗಣಿಸಲಾಗುವುದು ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ (ಯಾತ್ರೆ) ಸಚಿವಾಲಯ ಹೇಳಿದೆ.

ಇಂಥವರಿಗೆ ಮಾತ್ರ ಯಾತ್ರೆ ಕೈಗೊಳ್ಳಲು, ಮೆಕ್ಕಾ ಹಾಗೂ ಮದಿನಾದ ಭವ್ಯ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಮದಿನಾದಲ್ಲಿರುವ ಪ್ರವಾದಿಗಳ ಮಸೀದಿ ಪ್ರವೇಶಿಸಬೇಕಿದ್ದರೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ನಿಯಮವು ರಂಜಾನ್‌ ತಿಂಗಳ ಆರಂಭದಿಂದ ಜಾರಿಗೆ ಬರಲಿದೆ ಎಂದು ಸಚಿವಾಲಯ ಹೇಳಿದ್ದು, ಎಷ್ಟು ಸಮಯದ ವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ತಿಳಿಸಿಲ್ಲ. ವರ್ಷದ ಕೊನೆಯಲ್ಲಿ ಬರುವ ಹಜ್ ಯಾತ್ರೆಗೂ ಅನ್ವಯವಾಗಲಿದೆಯೇ ಎಂಬುದನ್ನೂ ಸ್ಪಷ್ಟಪಡಿಸಿಲ್ಲ.

ಸೌದಿ ಅರೇಬಿಯಾದಲ್ಲಿ ಕೋವಿಡ್‌ನಿಂದ ಈವರೆಗೆ 3,93,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು 6,700 ಸಾವು ಸಂಭವಿಸಿದೆ.

ಈ ಮಧ್ಯೆ, 50 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.