ADVERTISEMENT

Covid-19 World Update: ನಾರ್ವೆಯಲ್ಲಿ ಫೈಝರ್ ಲಸಿಕೆ ಪಡೆದ 23 ವೃದ್ಧರು ಸಾವು

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 15:50 IST
Last Updated 16 ಜನವರಿ 2021, 15:50 IST
   

ವಾಷಿಂಗ್ಟನ್‌:ನಾರ್ವೆಯಲ್ಲಿ ಫೈಝರ್/ಬಯೋಎನ್‌ಟೆಕ್ ಕೋವಿಡ್‌–19 ಲಸಿಕೆ ಹಾಕಿಸಿಕೊಂಡ ಕೆಲವೇ ಸಮಯದಲ್ಲಿ ಸುಮಾರು 23 ವೃದ್ಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ನಾರ್ವೆಯಲ್ಲಿ ಫೈಝರ್/ಬಯೋಎನ್‌ಟೆಕ್‌ ಲಸಿಕೆ ಮಾತ್ರವೇ ಶುಕ್ರವಾರದ ವರೆಗೆ ಲಭ್ಯವಿತ್ತು ಮತ್ತು ‘ಎಲ್ಲ ಸಾವುಗಳೊಂದಿಗೆ ಈ ಲಸಿಕೆ ಸಂಬಂಧ ಹೊಂದಿದೆ’ ಎಂದು ನಾರ್ವೆಯ ಮೆಡಿಸಿನ್ಸ್ ಏಜೆನ್ಸಿ ಪ್ರತಿಕ್ರಿಯಿಸಿದೆ. 23 ಸಾವುಗಳಲ್ಲದೆ, ಇನ್ನೂಒಂಬತ್ತು ಜನರು ವಾಕರಿಕೆ. ಅಲರ್ಜಿ, ನೋವು ಸೇರಿದಂತೆ ಗಂಭೀರ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದೂ ತಿಳಿಸಿದೆ.

23 ವೃದ್ಧರ ಸಾವಿನ ಹಿನ್ನೆಲೆಯಲ್ಲಿ ಜನರಿಗೆ ಲಸಿಕೆ ನೀಡುವ ವಿಚಾರದಲ್ಲಿ ವೈದ್ಯರು ತೀವ್ರ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ADVERTISEMENT

20 ಲಕ್ಷ ದಾಟಿದ ಸಾವಿನ ಸಂಖ್ಯೆ
ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 9.44 ಕೋಟಿ ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 6.74 ಕೋಟಿ ಸೋಂಕಿತರು ಗುಣಮುಖರಾಗಿದ್ದು, 20.20 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊ ಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ.

ವಿಶ್ವದಾದ್ಯಂತ ಇಂದು ಹೊಸದಾಗಿ 1.51 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, 3,715 ಜನರು ಮೃತಪಟ್ಟಿದ್ದಾರೆ. ಇದೇ ವೇಳೆ 1.46 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ 2.49 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1.11 ಜನರ ಸ್ಥಿತಿ ಗಂಭೀರವಾಗಿದೆ.

ಅತಿಹೆಚ್ಚು (2.41 ಕೋಟಿ) ಸೋಂಕು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಇಂದು 13,079 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ದೇಶದಲ್ಲಿ ಇದುವರೆಗೆ ಒಟ್ಟು 4.01 ಲಕ್ಷ ಸೋಂಕಿತರು ಮೃತಪಟ್ಟಿದ್ದಾರೆ. 1.05 ಕೋಟಿ ಸೋಂಕು ಪ್ರಕರಣಗಳು ವರದಿಯಾಗಿರುವ ಭಾರತದಲ್ಲಿ 1.01 ಕೋಟಿ ಸೋಂಕಿತರು ಗುಣಮುಖರಾಗಿದ್ದು, 1.52 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇನ್ನೂ 2.12 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ.

ಉಳಿದಂತೆ ಸೋಂಕು ಪ್ರಕರಣಗಳ ಸಂಖ್ಯೆ ಬ್ರೆಜಿಲ್‌ನಲ್ಲಿ 83.94 ಲಕ್ಷ, ರಷ್ಯಾದಲ್ಲಿ 35.44 ಲಕ್ಷ, ಇಂಗ್ಲೆಂಡ್‌ನಲ್ಲಿ 33.16 ಲಕ್ಷ, ಫ್ರಾನ್ಸ್‌ನಲ್ಲಿ 28.72 ಲಕ್ಷ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.