ADVERTISEMENT

Covid-19 World Update: ಭೀತಿ ಹುಟ್ಟಿಸಿದ ಕೊರೊನಾ ವೈರಸ್ ಹೊಸ ಪ್ರಬೇಧ

ರಾಯಿಟರ್ಸ್
Published 21 ಡಿಸೆಂಬರ್ 2020, 17:21 IST
Last Updated 21 ಡಿಸೆಂಬರ್ 2020, 17:21 IST
ಲಂಡನ್‌ನಿಂದ ರೋಮ್‌ಗೆ ವಿಮಾನಯಾನ ರದ್ದು
ಲಂಡನ್‌ನಿಂದ ರೋಮ್‌ಗೆ ವಿಮಾನಯಾನ ರದ್ದು   

ಲಂಡನ್: ಕೊರೊನಾ ವೈರಸ್‌ನ ಹೊಸ ಪ್ರಬೇಧ ಬ್ರಿಟನ್‌ನಲ್ಲಿ ವ್ಯಾಪಕವಾಗಿ ಹರಡಲಾರಂಭವಾಗಿರುವ ಮಧ್ಯೆಯೇ ದಕ್ಷಿಣ ಆಫ್ರಿಕಾ, ಇಟಲಿ, ರಷ್ಯಾದಲ್ಲಿಯೂ ಹೊಸ ‍ಪ್ರಬೇಧ ಹರಡುತ್ತಿರುವ ಬಗ್ಗೆ ವರದಿಯಾಗಿರುವುದು ಆತಂಕ ಸೃಷ್ಟಿಸಿದೆ.

ರೂಪಾಂತರಿತ ವೈರಸ್ ಹರಡುವ ಭೀತಿಯಿಂದ ಜರ್ಮನಿ, ಇಟಲಿ, ಬೆಲ್ಜಿಯಂ, ಡೆನ್ಮಾರ್ಕ್, ಬಲ್ಗೇರಿಯಾ, ದಿ ಐರಿಷ್ ಗಣರಾಜ್ಯ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ದೇಶದ ಗಡಿಭಾಗಗಳನ್ನು ಬಂದ್ ಮಾಡಿವೆ. ಭಾರತವೂ ಡಿ. 31ರವರೆಗೆ ಬ್ರಿಟನ್‌ನಿಂದ ಭಾರತಕ್ಕೆ ವಿಮಾನಗಳ ಹಾರಾಟ ರದ್ದುಗೊಳಿಸಿದೆ.

ಈ ಮಧ್ಯೆ, ಬ್ರಿಟನ್‌ನಲ್ಲಿ ಪತ್ತೆಯಾಗಿರುವ, ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್‌ನ ಹೊಸ ಪ್ರಭೇದ ಮಾರಕ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಮೆರಿಕದ ಸರ್ಜನ್ ಜನರಲ್, ಭಾರತ ಮೂಲದ ವಿವೇಕ್ ಮೂರ್ತಿ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಕಾಣಿಸಿಕೊಂಡ ರೀತಿಯಲ್ಲೇ ಇಟಲಿಯಲ್ಲೂ ರೋಗಿಯಲ್ಲಿ ಹೊಸ ಸ್ವರೂಪದ ಕೋವಿಡ್-19 ಸೋಂಕು ಪತ್ತೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಭಾನುವಾರ ಬೆಳಿಗ್ಗೆ ವರದಿ ಮಾಡಿತ್ತು.

ಕೆಲವು ದಿನಗಳ ಹಿಂದೆ ರೋಗಿ ಮತ್ತವರ ಪತ್ನಿ ಬ್ರಿಟನ್‌ನಿಂದ ರೋಮ್‌ನ ಫ್ಯೂಮಿಚಿನೊ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈಗ ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತ್ತು.

ಬ್ರಿಟನ್‌ನಲ್ಲಿ ನೂತನ ಸ್ವರೂಪದ ಕೊರೊನಾವೈರಸ್ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರುವ ಆತಂಕ ಕಾಡುತ್ತಿದೆ. ಅಲ್ಲದೆ ಇದನ್ನು ತಡೆಗಟ್ಟಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ತಿಳಿಸಿದೆ.

7.74 ಕೋಟಿ ದಾಟಿದ ಕೋವಿಡ್-19 ಸೋಂಕು ಪ್ರಕರಣ

ವರ್ಲ್ಡೊಮೀಟರ್ ಅಂಕಿಅಂಶಗಳ ಪ್ರಕಾರ ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ ಸೋಮವಾರ ರಾತ್ರಿವೇಳೆಗೆ 7.74 ಕೋಟಿ ದಾಟಿದೆ.

ವಿಶ್ವದ್ಯಾಂತ ಈ ವರೆಗೆ ಕೋವಿಡ್-19 ಸೋಂಕಿನಿಂದಾಗಿ 17 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 5.43 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ಅತಿ ಹೆಚ್ಚು ಸೋಂಕು ಪ್ರಕರಣ ಕಂಡುಬಂದಿರುವ ಅಮೆರಿಕದಲ್ಲಿ 1.82 ಕೋಟಿಗೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 1.0 ಕೋಟಿ, ಬ್ರೆಜಿಲ್‌ನಲ್ಲಿ 72.41 ಲಕ್ಷ, ರಷ್ಯಾದಲ್ಲಿ 28.77 ಲಕ್ಷ ಮತ್ತು ಫ್ರಾನ್ಸ್‌ನಲ್ಲಿ 24.73 ಲಕ್ಷಕ್ಕೂ ಹೆಚ್ಚು ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗಿದೆ.

ನೂತನ ಸ್ವರೂಪದ ಸೋಂಕು ಕಂಡುಬಂದಿರುವ ಬ್ರಿಟನ್‌ನಲ್ಲಿ 20.73 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. ಈ ಪೈಕಿ 67,616 ಮಂದಿ ಮೃತಪಟ್ಟಿದ್ದಾರೆ.

ಇನ್ನು ಅಮೆರಿಕದಲ್ಲಿ 3.24 ಲಕ್ಷಕ್ಕೂ ಅಧಿಕ, ಭಾರತದಲ್ಲಿ 1.46 ಲಕ್ಷಕ್ಕೂ ಅಧಿಕ, ಬ್ರೆಜಿಲ್‌ನಲ್ಲಿ 1.86 ಲಕ್ಷಕ್ಕೂ ಅಧಿಕ, ರಷ್ಯಾದಲ್ಲಿ 51,351, ಫ್ರಾನ್ಸ್‌ನಲ್ಲಿ 69,214 ಮತ್ತು ಇಟಲಿಯಲ್ಲಿ 69,214 ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.