ADVERTISEMENT

ಅಮೆರಿಕದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ: ಎಚ್‌-1ಬಿ ವಿಸಾ ನಿಯಮ ಸಡಿಲಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 2:50 IST
Last Updated 31 ಮಾರ್ಚ್ 2020, 2:50 IST
   

ವಾಸಿಂಗ್ಟನ್‌:ಕೆಲಸ ಕಳೆದುಕೊಂಡ ನಂತರ 60 ದಿನಗಳ ಒಳಗಾಗಿ ಅಮೆರಿಕ ತ್ಯಜಿಸುವ ನಿಯಮವನ್ನು ಸಡಿಲಿಸಿ 180 ದಿನಗಳಿಗೆ ವಿಸ್ತರಿಸಬೇಕು ಎಂದು ಎಚ್‌-1ಬಿ ವಿಸಾ ಹೊಂದಿರುವ ವಿದೇಶಿಗರು ಟ್ರಂಪ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಾಗತಿಕ ಪಿಡುಗು ಕೋವಿಡ್‌-19 ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಹಿನ್ನೆಡೆ ಉಂಟು ಮಾಡಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಏಪ್ರಿಲ್‌ ಕೊನೆಯವರೆಗೂ ಅಮೆರಿಕ ಸರ್ಕಾರ ಅಲ್ಲಿನ ನಾಗರಿಕರ ಮೇಲೆ ಹೇರಿರುವ ನಿರ್ಬಂಧಗಳು ಇನ್ನಷ್ಟು ಕಠಿಣಗೊಳ್ಳಲಿವೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ADVERTISEMENT

ಅಮೆರಿಕದ ಬಹುತೇಕ ರಾಜ್ಯಗಳು ಲಾಕ್‌ಡೌನ್‌ ಆಗಿದ್ದು, ಬಹುರಾಷ್ಟ್ರೀಯ ಕಂಪನಿಗಳು ತೀವ್ರ ಗಾತ್ರದ ನಷ್ಟ ಅನುಭವಿಸಲಿವೆ ಎಂದು ಅಂದಾಜಿಸಲಾಗಿದೆ.

ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ವಿದೇಶಿಗರು ಅದರಲ್ಲೂ ಭಾರತ ಮತ್ತು ಚೀನಾದಿಂದ ವಲಸೆ ಹೋದವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ನೌಕರಿ ಉದ್ದೇಶದಿಂದ ನೀಡಲಾಗುವ ಎಚ್‌-1ಬಿ ವಿಸಾದ ನಿಯಮವನ್ನು ಸಡಿಲಗೊಳಿಸಲು ಅಲ್ಲಿನ ವಿದೇಶಿ ನೌಕರರು ಕೋರಿದ್ದಾರೆ.

ಈಗಿರುವ ನಿಯಮದ ಪ್ರಕಾರ ಅಮೆರಿಕಾದಲ್ಲಿ ಕೆಲಸ ಕಳೆದುಕೊಂಡ ನಂತರ ವಿದೇಶಿಗರು 60 ದಿನಗಳಲ್ಲಿ ದೇಶವನ್ನು ತ್ಯಜಿಸಬೇಕು. ಆ ನಿಯಮವನ್ನು 60 ದಿನಗಳ ಬದಲು 180 ದಿನಗಳಿಗೆ ವಿಸ್ತರಿಸಬೇಕು ಎಂದು ಅಮೆರಿಕ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಈಗಾಗಲೇ ಅಮೆರಿಕಾದಲ್ಲಿ 33 ಲಕ್ಷ ನೌಕರಿಗಳು ಕೈತಪ್ಪಿವೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.