ADVERTISEMENT

ಇಂಡೊನೇಷ್ಯಾ: ಸುಕರ್ನೊ ಪುತ್ರಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2021, 15:30 IST
Last Updated 26 ಅಕ್ಟೋಬರ್ 2021, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಕಾರ್ತ: ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಸುಕರ್ನೊ ಅವರ ಪುತ್ರಿ 69 ವರ್ಷದ ಸುಕ್ಮಾವತಿ ಅವರು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಸ್ವ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ವರದಿಯಾಗಿದೆ.

‘ನಾನು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮದತ್ತ ಸಾಗಲು ನನ್ನ ಅಜ್ಜಿ ನ್ಯೋಮನ್ ರೈ ಸಿಂಬೆನ್‌ ಅವರ ಪ್ರಭಾವವೇ ಮುಖ್ಯ ಕಾರಣ’ ಎಂದು ಸುಕ್ಮಾವತಿ ಅವರು ಹೇಳಿಕೊಂಡಿರುವುದಾಗಿ ಸಿಎನ್ಎನ್‌ ವರದಿ ಮಾಡಿದೆ.

ಅಕ್ಟೋಬರ್ 26 ರಂದು (ಮಂಗಳವಾರ) ನಡೆಯುವ ಸಮಾರಂಭದಲ್ಲಿ ತಾವು ಹಿಂದೂ ಧರ್ಮಕ್ಕೆ ಮತಾಂತರವಾಗುವುದಾಗಿ ಸುಕ್ಮಾವತಿ ಅವರು ಇತ್ತೀಚಿಗೆ ತಿಳಿಸಿದ್ದರು.

ಸುಕ್ಮಾವತಿ ಅವರು ಇಂಡೋನೇಷಿಯನ್‌ ನ್ಯಾಷನಲ್‌ ಪಾರ್ಟಿ ಸ್ಥಾಪಕರಾಗಿದ್ದಾರೆ. ಸುಜಿವಾ ಕುಸುಮಾ ಅವರೊಂದಿಗೆ ವಿವಾಹವಾಗಿದ್ದರು. ಬಳಿಕ ಅವರು ವಿಚ್ಛೇದನ ಪಡೆದಿದ್ದಾರೆ.

ADVERTISEMENT

ಸುಕ್ಮಾವತಿ ಅವರು ಹಿಂದೂ ಧರ್ಮದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿದ್ದಾರೆ ಎಂದು ಅವರ ಸಹವರ್ತಿಗಳು ಹೇಳಿದ್ದಾರೆ. 2018ರಲ್ಲಿ ಹಲವು ಇಸ್ಲಾಮಿಕ್ ಸಂಘಟನೆಗಳು ಸುಕ್ಮಾವತಿ ಅವರು ಇಸ್ಲಾಂ ವಿರೋಧಿ ಕವನಗಳನ್ನು ವಾಚಿಸಿದ್ದಾರೆ ಎಂದು ಆರೋಪಿಸಿದ್ದವು. ಆ ಸಂದರ್ಭದಲ್ಲಿ ಅವರು ಕ್ಷಮೆ ಕೋರಿದ್ದರು.

ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿ ದೊಡ್ಡ ಧರ್ಮವಾಗಿದೆ. ಇಡೀ ವಿಶ್ವದಲ್ಲೇ ಮುಸ್ಲಿಮರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಜತೆಗೆ, ಹಿಂದೂ ಧರ್ಮೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉಳಿದಂತೆ ಮೊದಲ ಸ್ಥಾನದಲ್ಲಿ ಭಾರತ, ಎರಡನೇ ಸ್ಥಾನದಲ್ಲಿ ನೇಪಾಳ, ಮೂರನೇ ಸ್ಥಾನದಲ್ಲಿ ಬಾಂಗ್ಲಾದೇಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.