ADVERTISEMENT

ಕದನ ವಿರಾಮಕ್ಕೆ ಸಮ್ಮತಿ ಬೆನ್ನಲ್ಲೇ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 6:50 IST
Last Updated 27 ಫೆಬ್ರುವರಿ 2021, 6:50 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್: ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಭಾರತ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಗ್ರಹಿಸಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಹಾಗೂ ಪಾಕಿಸ್ತಾನ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಇಮ್ರಾನ್ ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದಾರೆ.

‘ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಪಾಲನೆಯನ್ನು ಸ್ವಾಗತಿಸುತ್ತೇನೆ. ಮುಂದಿನ ಪ್ರಗತಿಗೆ ಅನುವು ಮಾಡಿಕೊಡುವ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಕೈಯಲ್ಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಲ್ಲೇಖಿಸಿರುವ ಕಾಶ್ಮೀರಿ ಜನರ ಸ್ವ–ನಿರ್ಣಯದ ಹಕ್ಕು ಮತ್ತು ದೀರ್ಘಾವಧಿಯ ಬೇಡಿಕೆಯನ್ನು ಈಡೇರಿಸಲು ಭಾರತವು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.

‘ವಶಪಡಿಸಿಕೊಂಡ ಭಾರತೀಯ ಪೈಲಟ್ ಅನ್ನು ಮರಳಿ ಕಳುಹಿಸುವ ಮೂಲಕ ಭಾರತೀಯ ಸೇನೆಯ ಅಪಾಯಕಾರಿ ನೀತಿಯ ವಿರುದ್ಧ ನಾವು ಪಾಕಿಸ್ತಾನದ ಜವಾಬ್ದಾರಿಯುತ ನಡವಳಿಕೆಯನ್ನು ಜಗತ್ತಿಗೆ ತೋರಿಸಿದ್ದೇವೆ. ನಾವು ಯಾವತ್ತೂ ಶಾಂತಿಯ ಪರವಾಗಿದ್ದು, ಮಾತುಕತೆ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಸಿದ್ಧರಿದ್ದೇವೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಕದನ ವಿರಾಮ ನಿಯಮಗಳ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಣ ಸಭೆಯಲ್ಲಿ ಒಮ್ಮತ ಮೂಡಿ ಬಂದಿತ್ತು. ಬಳಿಕ ಗುರುವಾರ ಜಂಟಿ ಪ್ರಕಟಣೆ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.