ADVERTISEMENT

ಸಂತ್ರಸ್ತರಿಗೆ ಕ್ರೀಡಾಂಗಣ, ಬಯಲೇ ಆಸರೆ

ಭೂಕಂಪ: ಟರ್ಕಿ, ಸಿರಿಯಾದಲ್ಲಿ ಅವಶೇಷ ಬಗೆದಷ್ಟೂ ಸಿಗುತ್ತಿವೆ ಶವ

ಏಜೆನ್ಸೀಸ್
Published 9 ಫೆಬ್ರುವರಿ 2023, 16:20 IST
Last Updated 9 ಫೆಬ್ರುವರಿ 2023, 16:20 IST
   

ಗಾಝಿಯಾನ್‌ಟೆಪ್‌ (ಟರ್ಕಿ): ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ದುರಂತದಿಂದ ಮನೆ, ದುಡಿಮೆ ಹಾದಿ ಕಳೆದುಕೊಂಡ ಸಾವಿರಾರು ಸಂತ್ರಸ್ತರ ಬದುಕು ಈಗ ಅತಂತ್ರವಾಗಿದೆ. ಮೈಕೊರೆವ ಚಳಿಯ ನಡುವೆ ಆಹಾರ, ನೀರು, ಬಟ್ಟೆ, ಸೂರಿಗಾಗಿ ಸಂತ್ರಸ್ತರು ಪರಿತಪಿಸುತ್ತಿದ್ದಾರೆ.

ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಸದ್ಯಕ್ಕೆ ಸಂತ್ರಸ್ತರಿಗೆ ಸಮುದಾಯ ಭವನಗಳು, ಶಾಪಿಂಗ್‌ ಮಾಲ್‌ಗಳಲ್ಲಿ ಆಸರೆ ಕಲ್ಪಿಸಲಾಗಿದೆ. ಆದರೆ, ಇಷ್ಟು ಸಾಕಾಗದೆ, ಕ್ರೀಡಾಂಗಣ, ಬಯಲು ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ತೆರೆದು ತಾತ್ಕಾಲಿಕ ಆಶ್ರಯವನ್ನು ಕಲ್ಪಿಸಲಾಗಿದೆ.

ಮನೆಗಳನ್ನು ಕಳೆದುಕೊಂಡ ಹತ್ತಾರು ಸಾವಿರ ಜನರು ಡೇರೆಗಳು, ಕ್ರೀಡಾಂಗಣಗಳು ಮತ್ತು ಇತರ ತಾತ್ಕಾಲಿಕ ವಸತಿ ಸೌಕರ್ಯಗಳಲ್ಲಿ ಆಶ್ರಯ ಪಡೆದಿದ್ದರೆ, ಇನ್ನು ಸಾವಿರಾರು ಜನರು ಬಯಲುಗಳಲ್ಲೇ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಅದರಲ್ಲೂ ಈ ಚಳಿ ಸಹಿಸಿಕೊಳ್ಳುವುದು ಅಸಾಧ್ಯವಾಗಿದೆ. ಜನರು ಅವಶೇಷಗಳಡಿಯಿಂದ ಪಾರಾಗಿ ಬಂದರೂ ಕೊರೆವ ಚಳಿಯಿಂದ ಬದುಕುಳಿಯುವುದು ಕಷ್ಟವಾಗಿದೆ. ಧ್ವಂಸವಾಗಿರುವ ಪ್ರದೇಶದಿಂದ ಜನರನ್ನು ಸರ್ಕಾರ ತಕ್ಷಣ ಸ್ಥಳಾಂತರಿಸಬೇಕು ಎಂದು ದುರಂತದಲ್ಲಿ ಬದುಕುಳಿದ ಅಹ್ಮೆತ್ ಟೋಕ್‌ಗಾಜ್‌ ಎಂಬುವವರು ಒತ್ತಾಯಿಸಿದರು.

ADVERTISEMENT

ಅವಶೇಷಗಳಡಿ ಸಿಲುಕಿ ಜೀವನ್ಮರಣದಲ್ಲಿದ್ದ ಬಹುತೇಕರನ್ನು ರಕ್ಷಣಾ ಸಿಬ್ಬಂದಿ ಗುರುವಾರ ಸುರಕ್ಷಿತವಾಗಿ ಹೊರ ತಂದಿದ್ದಾರೆ. ನಾಲ್ಕು ದಿನಗಳು ಕಳೆದ ಮೇಲೆ ಈ ಭೀಕರ ದುರಂತದಲ್ಲಿ ಸಿಲುಕಿದವರು ಬದುಕುಳಿದಿರುವ ಆಶಾಭಾವನೆ ಕ್ಷೀಣಿಸುತ್ತಿದೆ. ಆದರೆ, ಅವಶೇಷಗಳಡಿ ಪವಾಡದ ರೀತಿ ಕೆಲವೊಬ್ಬರು ಬದುಕಿರುವುದು ಪತ್ತೆಯಾದಾಗ, ರಕ್ಷಣಾ ಸಿಬ್ಬಂದಿಯ ಭರದ ಶೋಧ ಕಾರ್ಯಕ್ಕೆ ಮತ್ತಷ್ಟು ಸ್ಫೂರ್ತಿ ಸಿಗುತ್ತಿದೆ.

ಸಿರಿಯಾ ಸರ್ಕಾದ ಹಿಡಿತದ ಅಲೆಪ್ಪೊ ನಗರದ ಕೇಂದ್ರ ಭಾಗದಲ್ಲಿ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಬದುಕುಳಿದಿದ್ದ ಏಳು ಜನರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತಂದರು. ಅದೇ ಕಟ್ಟಡದಲ್ಲಿ 44 ಶವಗಳನ್ನು ಹೊರತೆಗೆಯಲಾಯಿತು ಎಂದು ಸರ್ಕಾರಿ ವಾಹಿನಿ ವರದಿ ಮಾಡಿದೆ.

‘ಶೋಧ ಕಾರ್ಯವನ್ನು ಇನ್ನಷ್ಟು ವೇಗವಾಗಿ ನಡೆಸಲು ಭಾರಿ ಯಂತ್ರೋಪಕರಣಗಳ ತುರ್ತು ಅಗತ್ಯವಿತ್ತು. ರಕ್ಷಣೆಗೆ ಇದ್ದ ಅಮೂಲ್ಯ ಸಮಯ ಮೀರಿ ಹೋಗಿದೆ. ಆದರೂ ಒಂದೊಂದು ಜೀವ ಉಳಿಸಲು ಪ್ರತಿ ಸೆಕೆಂಡು ಕೂಡ ಮುಖ್ಯವೆಂದು ನಾವು ಸಮಯದ ವಿರುದ್ಧವೇ ಓಡುತ್ತಿದ್ದೇವೆ’ ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಅರೆ ವೈದ್ಯಕೀಯ ತಂಡವೊಂದು ಹೇಳಿದೆ.

ರಕ್ಷಣಾ ಕಾರ್ಯದಲ್ಲಿ 1.10 ಲಕ್ಷ ಸಿಬ್ಬಂದಿ

ರಕ್ಷಣಾ ಕಾರ್ಯದಲ್ಲಿ 1.10 ಲಕ್ಷ ಸಿಬ್ಬಂದಿ ತೊಡಗಿದ್ದಾರೆ. ದುರಂತದ ಸ್ಥಳಗಳಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗಲು ಟ್ರ್ಯಾಕ್ಟರ್‌ಗಳು, ಕ್ರೇನ್‌ಗಳು, ಇಟಾಚಿ, ಜೆಸಿಬಿ ಯಂತ್ರಗಳು, ಬುಲ್ಡೋಜರ್‌ಗಳು ಸೇರಿ ಸುಮಾರು 5,500 ವಾಹನಗಳನ್ನು ರವಾನಿಸಲಾಗಿದೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಏಜೆನ್ಸಿ ಹೇಳಿದೆ.

ಹಾನಿಗೀಡಾಗಿರುವ ಗಾಝಿಯಾನ್‌ಟೆಪ್‌, ಹತಾಯ್‌, ಓಸ್ಮಾನಿಯೆ ಮತ್ತು ಕಿಸಿ ಪ್ರದೇಶಗಳಿಗೆ ಗುರುವಾರವೂ ಭೇಟಿ ನೀಡಿ ಪರಿಶೀಲಿಸಿದ ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಪ್‌ ಎರ್ಡೊಗನ್ ಅವರು ‘ಈ ದುರಂತದಲ್ಲಿ ಆಗಿರುವ ತೊಂದರೆ ಮತ್ತು ಹಾನಿ ಭಾರಿ ಪ್ರಮಾಣದಲ್ಲಿದೆ. ದೇಶದಲ್ಲಿ ಸಾವಿನ ಸಂಖ್ಯೆ 16,000ಕ್ಕಿಂತಲೂ ಹೆಚ್ಚಿದೆ. 63,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ’ ಎಂದು ಹೇಳಿದರು.

ರಕ್ಷಣಾ ಕಾರ್ಯ ಮಂದಗತಿಯಲ್ಲಿ ಸಾಗಿರುವ ಬಗ್ಗೆ ಸಂತ್ರಸ್ತರು ಎರ್ಡೊಗನ್‌ ಅವರ ಬಳಿ ಅಳಲು ತೋಡಿಕೊಂಡರು. ಸರ್ಕಾರದಿಂದ ಸಂತ್ರಸ್ತ ಕುಟುಂಬಗಳಿಗೆ ತಲಾ 10 ಸಾವಿರ ಲಿರಾ (₹44 ಸಾವಿರ) ನೆರವು ನೀಡುವುದಾಗಿ ಎರ್ಡೊಗನ್‌ ಘೋಷಿಸಿದರು.

ಸಿರಿಯಾದಲ್ಲಿ ಸರ್ಕಾರಿ ಹಿಡಿತ ಮತ್ತು ಬಂಡುಕೋರರ ಹಿಡಿತದ ಪ್ರದೇಶಗಳಲ್ಲಿ 3,100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 5,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಶ್ವಸಂಸ್ಥೆಯ ಟ್ರಕ್‌ಗಳು ಗುರುವಾರವಷ್ಟೇ ಸಿರಿಯಾದ ದುರಂತದ ಪ್ರದೇಶಗಳನ್ನು ತಲುಪಿದವು.

6 ವರ್ಷದ ಬಾಲೆ ರಕ್ಷಿಸಿದ ‘ಆಪರೇಷನ್‌ ದೋಸ್ತ್‌’

‘ಆಪರೇಷನ್‌ ದೋಸ್ತ್‌’ ಯೋಜನೆಯಡಿ ಟರ್ಕಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಭಾರತದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಅವಶೇಷಗಳಡಿ ಸಿಲುಕಿ ಬದುಕುಳಿದಿದ್ದ ಆರು ವರ್ಷದ ಬಾಲಕಿಯನ್ನು ಗುರುವಾರ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಗಾಝಿಯಾನ್‌ಟೆಪ್‌ ಪಟ್ಟಣದ ನುರ್ಡಗಿಯಲ್ಲಿ ಬಾಲಕಿ ರಕ್ಷಿಸಿದ ದೃಶ್ಯದ ತುಣುಕನ್ನು ಕೇಂದ್ರ ಗೃಹ ಸಚಿವಾಲಯ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಇಂಡೊನೇಷ್ಯಾದಲ್ಲೂ ಭೂಕಂಪ: ನಾಲ್ವರ ಸಾವು

(ಜಕರ್ತಾ ವರದಿ): ಇಂಡೊನೇಷ್ಯಾದ ಪೂರ್ವ ತುದಿಯ ಪಪುವಾ ಪ್ರಾಂತ್ಯದಲ್ಲಿ ಗುರುವಾರ 5.1 ತೀವ್ರತೆಯ ಭೂಕಂಪ ಸಂಭವಿಸಿ, ನಾಲ್ವರು ಮೃತಪಟ್ಟಿದ್ದಾರೆ.

ತೇಲುವ ರೆಸ್ಟೋರೆಂಟ್ ಸಮುದ್ರದಲ್ಲಿ ಮಗುಚಿ, ಅದರಲ್ಲಿದ್ದ ನಾಲ್ವರು ಜಲಸಮಾಧಿಯಾಗಿದ್ದಾರೆ. ಪಪುವಾ ಉತ್ತರದ ಕರಾವಳಿಯ ಜಯಪುರ ನಗರದಲ್ಲಿ ಕಂಪನದ ಕೇಂದ್ರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.