ADVERTISEMENT

ವಿಚ್ಛೇದನಕ್ಕೆ ಮೆಸೇಜ್‌ ಮಾಡಲೇಬೇಕು!

ಹೊಸ ಕಾನೂನು ಜಾರಿಗೊಳಿಸಿದ ಸೌದಿ ಅರೇಬಿಯಾ ಸರ್ಕಾರ

ರಾಯಿಟರ್ಸ್
Published 7 ಜನವರಿ 2019, 19:45 IST
Last Updated 7 ಜನವರಿ 2019, 19:45 IST
   

ಲಂಡನ್‌: ಸೌದಿ ಅರೇಬಿಯಾದಲ್ಲಿ ಪತ್ನಿಗೆ ವಿಚ್ಛೇದನ ನೀಡಬೇಕೆಂದರೆ ಪುರುಷರು ಲಿಖಿತ ಸಂದೇಶದ(ಟೆಕ್ಸ್ಟ್‌ ಮೆಸೇಜ್‌) ಮೂಲಕ ಮಾಹಿತಿ ನೀಡಬೇಕು ಎಂದು ಸರ್ಕಾರ ಹೊಸ ಕಾನೂನು ರೂಪಿಸಿದೆ.

ಸೌದಿ ಮಹಿಳೆಯರಿಗೆ ತಮ್ಮ ವಿವಾಹ ಸಂಬಂಧ ಕೊನೆಗೊಂಡಿದ್ದರ ಬಗ್ಗೆಈ ಮೊದಲು ಮಾಹಿತಿಯೂ ಇರುತ್ತಿರಲಿಲ್ಲ!

‘ಭಾನುವಾರದಿಂದಲೇ(ಡಿ.6) ನೂತನ ಕಾನೂನು ಜಾರಿಗೆ ಬಂದಿದೆ. ಮಹಿಳೆಯರು ತಮ್ಮ ವಿವಾಹ ಸಂಬಂಧ ಸ್ಥಿತಿಗತಿ ಬಗ್ಗೆ ತಿಳಿದುಕೊಂಡಿರಬೇಕು ಮತ್ತು ಜೀವನಾಂಶ ಪಡೆಯುವ ಅವರ ಹಕ್ಕನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಈ ಕಾನೂನು ಜಾರಿಗೆ ತರಲಾಗಿದೆ’ ಎಂದು ಸರ್ಕಾರ ಹೇಳಿದೆ.

ADVERTISEMENT

ಸಾಂಪ್ರದಾಯಿಕ ದೇಶದಲ್ಲಿ ಮಹಿಳಾ ಹಕ್ಕುಗಳನ್ನು ರಕ್ಷಿಸುವಕುರಿತು ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮಾತನಾಡಿದ್ದರು. ಅಲ್ಲದೆ, ಇತ್ತೀಚೆಗೆ, ಮಹಿಳೆಯರು ವಾಹನ ಓಡಿಸುವುದಕ್ಕೆ ಇದ್ದ ನಿರ್ಬಂಧವನ್ನು ಅವರು ತೆಗೆದು ಹಾಕಿದ್ದರು.

ತಮ್ಮ ವೈವಾಹಿಕ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಸಚಿವಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಸಂಬಂಧಿತ ನ್ಯಾಯಾಲಯಕ್ಕೆ ತೆರಳಿ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದು ಎಂದು ಸೌದಿ ಕಾನೂನು ಸಚಿವಾಲಯ ಹೇಳಿದೆ.

‘ಬಹುತೇಕ ಅರಬ್‌ ದೇಶಗಳಲ್ಲಿ ಪುರುಷರು ತಮ್ಮ ಪತ್ನಿಗೆ ಯಾವುದೇ ಮಾಹಿತಿ ನೀಡದೇ ವಿಚ್ಛೇದನ ನೀಡುತ್ತಾರೆ’ ಎಂದು ಗ್ಲೋಬಲ್‌ ರೈಟ್ಸ್‌ ಗ್ರೂಪ್‌ನ ಸಾವುದ್‌ ಅಬು ದಯ್ಯೆಹ್‌ ಹೇಳುತ್ತಾರೆ.

‘ತಾವು ವಿಚ್ಛೇದನ ಪಡೆದಿರುವ ಬಗ್ಗೆ ಮಹಿಳೆಯರಿಗೆ ಕನಿಷ್ಠ ಮಾಹಿತಿಯಾದರೂ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಇದೊಂದು ಸಣ್ಣ ಹೆಜ್ಜೆ ಇಟ್ಟಿದೆ. ಆದರೆ, ಅದು ಸರಿಯಾದ ದಿಕ್ಕಿನಲ್ಲಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.