
ವಾಷಿಂಗ್ಟನ್: ಇರಾನ್‌ನಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಸಂಘರ್ಷದಿಂದ ಮೃತಪಟ್ಟ ಮತ್ತು ಬಂಧನಕ್ಕೊಳಗಾದ ನಾಗರಿಕರ ಕುರಿತು ಮಾಹಿತಿ ಪಡೆಯಲು ಹಾಗೂ ಇರಾನ್‌ನೊಂದಿಗೆ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಮಂಗಳವಾರ ಸಮಾಲೋಚನೆ ನಡೆಸಿದರು.
‘ಇರಾನ್ ಸರ್ಕಾರವು ಬಹಳ ಕೆಟ್ಟದಾಗಿ ವರ್ತಿಸುತ್ತಿದೆ. ಈ ಕೊಲೆಗಳು ಗಮನಾರ್ಹವಾದದ್ದು, ಅದಕ್ಕೆ ತಕ್ಕಂತೆ ತನ್ನ ಆಡಳಿತವು ಕ್ರಮ ಕೈಗೊಳ್ಳಲಿದೆ’ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
‘ಪ್ರತಿಭಟನೆಗಳಿಂದ ಮೃತಪಟ್ಟ ಇರಾನಿಯನ್ನರ ಸಂಖ್ಯೆ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಸಾವಿನ ಸಂಖ್ಯೆಯ ಬಗ್ಗೆ ನನಗೆ ಐದು ವಿಭಿನ್ನ ರೀತಿಯ ಅಂಕಿ–ಅಂಶಗಳ ಮಾಹಿತಿ ಬಂದಿದೆ’ ಎಂದು ತಿಳಿಸಿದ್ದಾರೆ.
‘ಇರಾನ್ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಿದೆ. ಅದು ಜನರನ್ನು ಕೊಲ್ಲುವುದಿಲ್ಲವೆಂದು ಭಾವಿಸುತ್ತೇನೆ. ಸರ್ಕಾರವು ಮಾನವೀಯತೆಯನ್ನು ಪ್ರದರ್ಶಿಸಬೇಕು’ ಎಂದು ಸಲಹೆ ನೀಡಿದ್ದಾರೆ.
ಇರಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿದ ಟ್ರಂಪ್, ಇರಾನ್ ನಾಗರಿಕರ ನೆರವಿಗೆ ಬರುವುದಾಗಿ ಎಂದು ಭರವಸೆ ನೀಡಿದ್ದಾರೆ. ಆದರೆ, ಆ ನೆರವು ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಡಿಸೆಂಬರ್ 28ರಂದು ಪ್ರತಿಭಟನೆಗಳು ಆರಂಭವಾಗಿದ್ದು, 2 ಸಾವಿರಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ. 16,700 ಜನರನ್ನು ಬಂಧಿಸಲಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.