
ಬೆಂಜಮಿನ್ ನೆತನ್ಯಾಹು, ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ನ್ಯೂಯಾರ್ಕ್: ಅಮೆರಿಕ ಭೇಟಿಯಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಮೊದಲ ಸಾಲಿನಲ್ಲೇ ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
'ಅರ್ಮೇನಿಯಾ ಮತ್ತು ಅಜರ್‌ಬೈಜಾನ್ ನಡುವಣ ಯುದ್ಧವನ್ನು ನಾನು ನಿಲ್ಲಿಸಿದ್ದೇನೆ. ಸುಂಕ ಬೆದರಿಕೆ ಹಾಕಿ ಹಲವು ಸಂಘರ್ಷಗಳನ್ನು ನಿಲ್ಲಿಸಿದ್ದೇನೆ. ಅದರ ಯಾವ ಶ್ರೇಯಸ್ಸು ಸಿಗಲಿಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ನಿಲ್ಲಿಸಿದ್ದೇನೆ' ಎಂದು ಟ್ರಂಪ್ ಹೇಳಿದ್ದಾರೆ.
ಎಂಟು ಯುದ್ಧಗಳನ್ನು ಇತ್ಯರ್ಥಗೊಳಿಸಿದ್ದೇನೆ. ಕೆಲವು ದೇಶಗಳ ಕುರಿತು ಗೊತ್ತಿಲ್ಲದೇ ಇರಬಹುದು. ಅಜರ್‌ಬೈಜಾನ್....'10 ವರ್ಷಗಳಿಂದ ನಾನು ಪ್ರಯತ್ನಿಸುತ್ತಿದ್ದೆ. ಆ ಯುದ್ಧ ಇತ್ಯರ್ಥ್ಯಗೊಳಿಸಿದ್ದೀರಿ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ' ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
'ವ್ಯಾಪಾರವನ್ನು ನಿಲ್ಲಿಸುವುದಾಗಿ ನಾನು ಬೆದರಿಕೆ ಹಾಕಿದ್ದೆ. ಅದಾದ ಬಳಿಕ ಶೇ 200ರಷ್ಟು ತೆರಿಗೆ ಬೆದರಿಕೆಯನ್ನು ಹಾಕಿದೆ. ಮರುದಿನವೇ 35 ವರ್ಷಗಳ ಸಂಘರ್ಷವನ್ನು ಕೊನೆಗೊಳಿಸಿದರು' ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಿರುವುದಾಗಿ ಟ್ರಂಪ್ 70ಕ್ಕೂ ಹೆಚ್ಚು ಬಾರಿ ಪುನರಾವರ್ತಿಸಿದ್ದಾರೆ. ಆದರೆ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.