ಡೊನಾಲ್ಡ್ ಟ್ರಂಪ್
– ಫೇಸ್‌ಬುಕ್ ಚಿತ್ರ
ನ್ಯೂಯಾರ್ಕ್ / ವಾಷಿಂಗ್ಟನ್: ಭಾರತ ಹಾಗೂ ಪಾಕಿಸ್ತಾನ ಸಂಘರ್ಷವನ್ನು ನಾನೇ ಕೊನೆಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ. ಅಲ್ಲದೆ ನೊಬೆಲ್ ಶಾಂತಿ ಪ್ರಶಸ್ತಿಗೆ ನನ್ನಷ್ಟು ಆರ್ಹನಾದ ವ್ಯಕ್ತಿ ಇತಿಹಾಸದಲ್ಲಿ ಬೇರೊಬ್ಬ ಇಲ್ಲ ಎಂದಿದ್ದಾರೆ. ಏನೂ ಮಾಡದೆ ಬರಾಕ್ ಒಬಾಮಾ ನೊಬೆಲ್ ಪಡೆದರು ಎಂದು ಟೀಕಿಸಿದ್ದಾರೆ.
ವೆನಿಜುವೆಲಾದ ತೈಲ ಮೀಸಲುಗಳ ಬಗ್ಗೆ ಚರ್ಚಿಸಲು ಶ್ವೇತಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ತೈಲ ಹಾಗೂ ಅನಿಲ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆದ ಸಂಘರ್ಷದಲ್ಲಿ 8 ಯುದ್ಧ ವಿಮಾನಗಳು ಪತನವಾಗಿದೆ ಎಂದಿದ್ದಾರೆ. ಆದರೆ ಯಾವ ದೇಶಕ್ಕೆ ಸೇರಿದ ವಿಮಾನ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.
‘ನೋಡಿ, ಜನರು ಟ್ರಂಪ್‌ನನ್ನು ಇಷ್ಟ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ. 36. 32, 31, 28, 25 ವರ್ಷಗಳಿಂದ ನಡೆಯುತ್ತಿರುವ ಯುದ್ಧಗಳನ್ನು ಹಾಗೂ ಯುದ್ಧ ಸನ್ನಿವೇಶವಿದ್ದ ಭಾರತ ಹಾಗೂ ಪಾಕಿಸ್ತಾನ ಸಂಘರ್ಷವನ್ನು ನಿಲ್ಲಿಸಿದ್ದೇನೆ. ಅಲ್ಲಿ 8 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು’ ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ವರ್ಷ ಶ್ವೇತಭವನಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಅಧ್ಯಕ್ಷ ಶೆಹಬಾಜ್ ಶರೀಫ್, ಸಂಘರ್ಷ ನಿಲ್ಲಿಸಿದ ಕೀರ್ತಿಯನ್ನು ನನಗೆ ನೀಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.