ADVERTISEMENT

ಪಾಕಿಸ್ತಾನ, ಚೀನಾ ಅಣ್ವಸ್ತ್ರ ಪರೀಕ್ಷೆ ಮಾಡುತ್ತಿವೆ: ಡೊನಾಲ್ಡ್ ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2025, 9:24 IST
Last Updated 3 ನವೆಂಬರ್ 2025, 9:24 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ‍ಫೇಸ್‌ಬುಕ್ ಚಿತ್ರ

ವಾಷಿಂಗ್ಟನ್‌: ‘ಅಣ್ವಸ್ತ್ರಗಳನ್ನು ಪರೀಕ್ಷಿಸುತ್ತಿರುವ ದೇಶಗಳಲ್ಲಿ ಪಾಕಿಸ್ತಾನ ಮತ್ತು ಚೀನಾ ಸೇರಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ADVERTISEMENT

ಮೂರು ದಶಕಗಳ ನಂತರ ಅಮೆರಿಕದ ಸ್ವಂತ ಅಣ್ವಸ್ತ್ರಗಳ ಪರೀಕ್ಷೆಯನ್ನು ಪುನರಾರಂಭಿಸುವ ತಮ್ಮ ಆಡಳಿತದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವ ಭಾಗವಾಗಿ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ವಾರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗಿನ ಭೇಟಿಗೂ ಮುನ್ನ ಟ್ರಂಪ್‌ ಅವರು, ಅಮೆರಿಕವು ಪ್ರತಿಸ್ಪರ್ಧಿ ಶಕ್ತಿಗಳೊಂದಿಗೆ ಸರಿಸಮವಾಗಿ ಅಣ್ವಸ್ತ್ರಗಳ ಪರೀಕ್ಷೆಯನ್ನು ಆರಂಭಿಸುವುದಾಗಿ ಘೋಷಿಸಿದ್ದರು.

ಭಾನುವಾರ ‘ಸಿಬಿಎಸ್ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್‌ ಅವರು, ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವ ದೇಶಗಳೆಂದು ಹೆಸರಿಸಿದರು.

‘ರಷ್ಯಾ, ಚೀನಾ ಪರೀಕ್ಷೆ ನಡೆಸುತ್ತಿವೆ. ಆದರೆ, ಅವರು ಅದರ ಬಗ್ಗೆ ಮಾತನಾಡುವುದಿಲ್ಲ. ಉತ್ತರ ಕೊರಿಯಾ, ಪಾಕಿಸ್ತಾನ ಪರೀಕ್ಷೆ ನಡೆಸುತ್ತಿರುವುದು ನಿಸ್ಸಂಶಯ’ ಎಂದು ಟ್ರಂಪ್‌ ಹೇಳಿದರು.

‘ನಾವೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಬೇಕು. ಶಸ್ತ್ರಾಸ್ತ್ರಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ಪರೀಕ್ಷೆ ಅಗತ್ಯ’ ಎಂದು ಟ್ರಂಪ್‌ ಹೇಳಿದರು.

ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ‘ಅಮೆರಿಕ ಸೇನೆಯು ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ತನ್ನ ಕ್ಷಿಪಣಿಗಳನ್ನು ನಿಯಮಿತವಾಗಿ ಪರೀಕ್ಷಿಸುತ್ತದೆ. ಆದರೆ, 1992ರಿಂದ ಶಸ್ತ್ರಾಸ್ತ್ರಗಳನ್ನು ಸ್ಫೋಟಿಸಿಲ್ಲ.

ರಷ್ಯಾ ಪೋಸಿಡಾನ್‌ ಪರಮಾಣು ಸಾಮರ್ಥ್ಯದ ಸೂಪರ್‌ ಟಾರ್ಪಿಡೊವನ್ನು ಪರೀಕ್ಷಿಸಿದೆ ಎಂದು ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಕಳೆದ ವಾರ ಹೇಳಿದ್ದರು.

ಭಾರತ–ಪಾಕ್‌ ಸಂಘರ್ಷ ನಿಲ್ಲಿಸಿದೆ

‘ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ ಏಳು ಯುದ್ಧಗಳನ್ನು ನಿಲ್ಲಿಸಿದ ಕೀರ್ತಿ ನನಗೆ ಸಲ್ಲುತ್ತದೆ’ ಎಂದು ಟ್ರಂಪ್‌ ಮತ್ತೊಮ್ಮೆ ಹೇಳಿದರು.

‘ಈ ಮಧ್ಯೆ, ನಾನು ಎಂಟು ಯುದ್ಧಗಳನ್ನು ಪರಿಹರಿಸಿದ್ದೇನೆ. ಎಂಟು ಯುದ್ಧಗಳು ನಡೆಯುವುದನ್ನು ತಪ್ಪಿಸಿದ್ದೇನೆ’ ಎಂದರು.

‘ನಾನು ಇನ್ನೂ ಪರಿಹರಿಸಲಾಗದ ಏಕೈಕ ಯುದ್ಧವೆಂದರೆ ರಷ್ಯಾ–ಉಕ್ರೇನ್‌ ಯುದ್ಧ. ಆದರೆ, ಅದನ್ನೂ ನಿಲ್ಲಿಸಲಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.