
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ದಾಳಿಗಳ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಜನತೆಗೆ ಮಾಹಿತಿ ನೀಡುವುದಕ್ಕೆ ಅಸಾಂಪ್ರದಾಯಿಕ ವಿಧಾನದ ಮೊರೆ ಹೋಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಇರಾನ್ ಮೇಲೆ ದಾಳಿ ಅರಂಭಗೊಂಡ 48 ಗಂಟೆಗಳ ಬಳಿಕ ಅವರು, ದಾಳಿ ನಡೆಸುವುದಕ್ಕೆ ಏನು ಕಾರಣಗಳು ಹಾಗೂ ಈ ಕುರಿತು ಯಾವಾಗ ನಿರ್ಧರಿಸಲಾಯಿತು ಎಂಬ ಬಗ್ಗೆ ದೇಶದ ಜನತೆಗೆ ಮಾಹಿತಿ ನೀಡಿದ್ದಾರೆ.
ಅಮೆರಿಕದ ಹಿಂದಿನ ಅಧ್ಯಕ್ಷರು ಇಂತಹ ಸಂದರ್ಭಗಳಲ್ಲಿ, ದೇಶದ ಜನತೆಗೆ ಕೂಡಲೇ ಮಾಹಿತಿ ನೀಡುತ್ತಿದ್ದರು. ಹೀಗಾಗಿ ಟ್ರಂಪ್ ಅವರ ಈ ನಡೆ ಟೀಕೆಗೆ ಗುರಿಯಾಗಿದೆ.
ಅಸಾಧಾರಣ ಶೌರ್ಯ ಪ್ರದರ್ಶಿಸಿದ ಯೋಧರನ್ನು ಸನ್ಮಾನಿಸಲು ಶ್ವೇತಭವನದಲ್ಲಿ ಸೋಮವಾರ ಸಮಾರಂಭ ನಡೆದಿತ್ತು. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ, ಇರಾನ್ ಮೇಲೆ ದಾಳಿ ನಡೆಸಲು ಏನು ಕಾರಣ ಎಂಬ ಬಗ್ಗೆ ಟ್ರಂಪ್ ಮಾತನಾಡಿದ್ದರು. ಆದರೆ, ಸಮಾರಂಭದ ಬಳಿಕ ಸುದ್ದಿಗಾರರು ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ.
ಈ ಸಮಾರಂಭಕ್ಕೂ ಮುನ್ನ, ಪೆಂಟಗಾನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಹಾಗೂ ಸೇನಾ ಸಿಬ್ಬಂದಿ ಜಂಟಿ ಮುಖ್ಯಸ್ಥ ಡ್ಯಾನ್ ಕೇನ್ ಅವರು ಇರಾನ್ ಮೇಲಿನ ದಾಳಿಗಳ ಕುರಿತು ವಿವರಿಸಿದ್ದರು.
ದಾಳಿ ಕುರಿತು ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರುತ್ ಸೋಷಿಯಲ್’ನಲ್ಲಿ ಟ್ರಂಪ್ ಮಾಹಿತಿ ಹಂಚಿಕೊಂಡಿದ್ದರು.
ಈ ಎಲ್ಲ ಕಾರಣದಿಂದಾಗಿ, ಯುದ್ಧ ಕುರಿತಾದ ಮಾಹಿತಿ ನೀಡುವುದಕ್ಕೆ ಟ್ರಂಪ್ ಅನುಸರಿಸಿದ ವಿಧಾನದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ.
‘ಇರಾನ್ ವಿರುದ್ಧ ಯುದ್ಧ ಮಾಡುವುದರ ನಿರ್ಧಾರದ ಹಿಂದಿನ ತರ್ಕ ಹಾಗೂ ಉದ್ದೇಶದ ಬಗ್ಗೆ ಟ್ರಂಪ್ ಸಮರ್ಪಕ ವಿವರಣೆ ನೀಡಿಲ್ಲ. ಅದೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಯುದ್ಧ ಆರಂಭಗೊಂಡ ದಿನವೇ ಎರಡು ಹೇಳಿಕೆಗಳನ್ನು ಬಿಡುಗಡೆ ಮಾಡಿ, ವಿವರಣೆ ನೀಡಿದ್ದರು. ಇರಾನ್‌ನ ಕ್ಷಿಪಣಿ ಬಿದ್ದು, 9 ಜನರು ಸಾವನ್ನಪ್ಪಿದ ಸ್ಥಳದಲ್ಲಿಯೇ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಮಾಹಿತಿ ನೀಡಿದ್ದರು’ ಎಂದು ಜನರು ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.