ಪ್ರಮಾಣವಚನಕ್ಕೂ ಮುನ್ನಾದಿನವಾದ ಭಾನುವಾರ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್‌ನಲ್ಲಿ ಆಯೋಜಿಸಿದ್ದ ಔತಣಕೂಟ ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಶನ್‌ನ ಮುಖ್ಯಸ್ಥೆ ನೀತಾ ಅಂಬಾನಿ ಪಾಲ್ಗೊಂಡಿದ್ದರು
–ಪಿಟಿಐ ಚಿತ್ರ
ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಸೋಮವಾರ ಅಧಿಕಾರ ಸ್ವೀಕರಿಸಲಿದ್ದು, ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಶ್ವೇತಭವನದಲ್ಲಿ 100ಕ್ಕೂ ಅಧಿಕ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಲಿದ್ದಾರೆ.
ಟ್ರಂಪ್ ಅವರ ತಂಡವು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಓವಲ್ ಕಚೇರಿಯಲ್ಲಿರುವ ಡೆಸ್ಕ್‌ನಲ್ಲಿ ಆದೇಶ ಪ್ರತಿಗಳು ಸಿದ್ಧಗೊಂಡಿದೆ. ಎರಡನೇ ಅವಧಿಗೆ ಅಧ್ಯಕ್ಷರಾಗುತ್ತಿದ್ದಂತೆಯೇ, ಒಂದು ನಿಮಿಷವೂ ವ್ಯರ್ಥ ಮಾಡದಂತೆ, ಚುನಾವಣೆ ಸಂದರ್ಭದಲ್ಲಿ ನೀಡಿದ ಹಲವು ಭರವಸೆಗಳನ್ನು ಈಡೇರಿಸುವ ನಿರೀಕ್ಷೆಗಳಿವೆ.
‘ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ದಾಖಲೆ ಪ್ರಮಾಣದ ಆದೇಶಗಳಿಗೆ ಸಹಿ ಹಾಕಲಾಗುವುದು’ ಎಂದು ಎನ್‌ಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು. ಇದು 100ಕ್ಕೂ ಅಧಿಕವಾಗಿರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ‘ಹೌದು, ಅದೇ ಮಾದರಿಯಲ್ಲಿರಲಿದೆ’ ಎಂದು ತಿಳಿಸಿದ್ದರು.
ದೇಶದ ಅಧ್ಯಕ್ಷರು ಕೈಗೊಳ್ಳುವ ಏಕಪಕ್ಷೀಯ ಆದೇಶಗಳು ಕಾನೂನಿನ ವ್ಯಾಪ್ತಿಗೆ ಒಳಪಡುತ್ತವೆ. ಇದು ಜಾರಿಯಾಗಲು ಸಂಸತ್‌ನ ಅನುಮೋದನೆ ಅಗತ್ಯವಿಲ್ಲ. ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ.
‘ದಕ್ಷಿಣ ಗಡಿಭಾಗವನ್ನು ಮುಚ್ಚುವ ನಿರ್ಧಾರ, ಸಾಮೂಹಿಕ ಗಡಿಪಾರು, ಮಹಿಳಾ ಕ್ರೀಡಾ ವಿಭಾಗದಲ್ಲಿ ತೃತೀಯ ಲಿಂಗಿಗಳ ಭಾಗವಹಿಸುವಿಕೆಗೆ ತಡೆ, ಇಂಧನ ಬಳಕೆಗೆ ಹೇರಲಾಗಿರುವ ಮಿತಿ ಕೈಬಿಡುವುದು ಹಾಗೂ ಸರ್ಕಾರದ ಆಡಳಿತದಲ್ಲಿ ದಕ್ಷತೆ ಹೆಚ್ಚಳ ಸೇರಿ ಪ್ರಮುಖ ಐದು ವಿಚಾರಗಳಿಗೆ ಟ್ರಂಪ್ ಸಹಿಹಾಕುವ ಸಾಧ್ಯತೆಯಿದೆ’ ಎಂದು ಅವರ ನಿಕಟವರ್ತಿ ಸ್ಟೀಫನ್ ಮಿಲ್ಲರ್ ಅವರು ಸುದ್ದಿಸಂಸ್ಥೆಗಳಿಗೆ ತಿಳಿಸಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಅವರ ಚಿತ್ರವನ್ನು ಭಾನುವಾರ ಪಂಜಾಬ್‌ನ ಅಮೃತಸರದಲ್ಲಿ ಗೋಡೆ ಮೇಲೆ ಬರೆದ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.