ADVERTISEMENT

ಭಾರತ-ಪಾಕ್‌ ಸಂಘರ್ಷ ಕೊನೆಗೊಳಿಸುವಲ್ಲಿ ಟ್ರಂಪ್ ಪ್ರಮುಖ ಪಾತ್ರ: ಮಾರ್ಕೊ ರುಬಿಯೊ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:35 IST
Last Updated 24 ಸೆಪ್ಟೆಂಬರ್ 2025, 4:35 IST
<div class="paragraphs"><p>ಮಾರ್ಕೊ ರುಬಿಯೊ</p></div>

ಮಾರ್ಕೊ ರುಬಿಯೊ

   

ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನ ನಡುವಿನ ಅತ್ಯಂತ ಅಪಾಯಕಾರಿ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಡೊನಾಲ್ಡ್‌ ಟ್ರಂಪ್ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು, ‘ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಬಳಿಕ ವಿಶ್ವದ ಎಲ್ಲೆಡೆ ಶಾಂತಿಯನ್ನು ಪುನಃಸ್ಥಾಪಿಸುವುದನ್ನು ತಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದನ್ನಾಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಯಶಸ್ಸನ್ನು ಸಾಧಿಸಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ನಾವು ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷವನ್ನು ನೋಡಿದ್ದೇವೆ. ಅದು ತುಂಬಾ ಅಪಾಯಕಾರಿ ಸಂಘರ್ಷವಾಗಿತ್ತು. ಈ ಸಂದರ್ಭದಲ್ಲಿ ಟ್ರಂಪ್‌ ಮಧ್ಯಸ್ಥಿಕೆ ವಹಿಸಲು ನಿರ್ಧರಿಸಿದ್ದರು. ಇದರಿಂದಾಗಿ ಭಾರತ–ಪಾಕ್ ಯುದ್ಧ ನಿಲ್ಲಿಸಲು ಸಾಧ್ಯವಾಯಿತು’ ಎಂದು ಅವರು ತಿಳಿಸಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಕಾಂಬೋಡಿಯಾ, ಕೊಸೊವೊ ಮತ್ತು ಸೆರ್ಬಿಯಾ, ಕಾಂಗೋ ಮತ್ತು ರುವಾಂಡಾ, ಅಜೆರ್ಬೈಜಾನ್ ಮತ್ತು ಅರ್ಮೇನಿಯಾ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ ಸೇರಿದಂತೆ ದೀರ್ಘಕಾಲದ ಸಂಘರ್ಷಗಳನ್ನು ಪರಿಹರಿಸುವಲ್ಲಿ ಟ್ರಂಪ್ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಆದರೆ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಅಸಾಧಾರಣ ಸವಾಲು ಆಗಿದೆ’ ಎಂದು ರುಬಿಯೊ ಪ್ರತಿಪಾದಿಸಿದ್ದಾರೆ.

‘ವಿವಿಧ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಟ್ರಂಪ್ ನಿರಂತರವಾಗಿ ಶ್ರಮಿಸಿದ್ದಾರೆ. ಜತೆಗೆ, ತಮ್ಮದೇ ಆದ ಸಮಯ, ಶಕ್ತಿ ಮತ್ತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಟರ್ಕಿ, ಸೌದಿ ಅರೇಬಿಯಾ ಮತ್ತು ಅಲಾಸ್ಕಾದಲ್ಲಿ ನಡೆದ ಸಭೆಗಳು ಸಂಘರ್ಷವನ್ನು ಕೊನೆಗೊಳಿಸುವ ಗುರಿ ಹೊಂದಿವೆ’ ಎಂದು ಅವರು ಹೇಳಿದ್ದಾರೆ.

‘ಕೇವಲ ಮಿಲಿಟರಿ ಹೋರಾಟದಿಂದಲೇ ಯುದ್ಧಗಳನ್ನು ಕೊನೆಗೊಳಿಸಲು ಸಾಧ್ಯವಾಗುವುದಿಲ್ಲ. ಬದಲಾಗಿ ಮಾತುಕತೆ ನಡೆಸುವ ಮೂಲಕ ಯುದ್ಧವನ್ನು ನಿಲ್ಲಿಸಬಹುದು. ಸಂಘರ್ಷ ಹೆಚ್ಚು ಕಾಲ ಮುಂದುವರಿದಂತೆ ಸಾವುನೋವುಗಳು ಸಂಭವಿಸುತ್ತವೆ. ಜತೆಗೆ ಸಂಪತ್ತಿನ ನಾಶಕ್ಕೂ ಕಾರಣವಾಗುತ್ತದೆ’ ಎಂದಿದ್ದಾರೆ.

ಇದಕ್ಕೂ ಮೊದಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿದ್ದರು. ಸಂಘರ್ಷಗಳನ್ನು ಕೊನೆಗೊಳಿಸುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ. ಆದರೆ, ನಾನು ಕೇವಲ ಏಳು ತಿಂಗಳ ಅವಧಿಯಲ್ಲಿ ಏಳು ಅಂತ್ಯವಿಲ್ಲದ ಯುದ್ಧಗಳನ್ನು ಕೊನೆಗೊಳಿಸಿದ್ದೇನೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.