ADVERTISEMENT

ಹುಟ್ಟಿನಿಂದ ಸಿಗುವ ಪೌರತ್ವ ರದ್ದು ಮಾಡಿದ ಟ್ರಂಪ್: ಭಾರತೀಯ ವಲಸಿಗರಿಗೆ ಸಮಸ್ಯೆ

ಏಜೆನ್ಸೀಸ್
Published 22 ಜನವರಿ 2025, 5:39 IST
Last Updated 22 ಜನವರಿ 2025, 5:39 IST
<div class="paragraphs"><p>ಸಾಂರ್ಭಿಕ ಚಿತ್ರ</p></div>

ಸಾಂರ್ಭಿಕ ಚಿತ್ರ

   

ವಾಷಿಂಗ್ಟನ್: ‘ಹುಟ್ಟಿನಿಂದಾಗಿ ಸಿಗುವ ಪೌರತ್ವ’ ಹಕ್ಕು ನೀತಿಯನ್ನು ಅಂತ್ಯಗೊಳಿಸುವ ಕಾನೂನು ರದ್ದಿಗೆ ಅಧಿಕಾರ ಸ್ವೀಕರಿಸಿದ ಕೂಡಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

ತಮ್ಮ ಚುನಾವಣಾ ಪ್ರಚಾರದ ವೇಳೆಯೇ ಇದನ್ನು ರದ್ದು ಮಾಡುವುದಾಗಿ ಟ್ರಂಪ್ ಹೇಳಿದ್ದರು. ಪದಗ್ರಹಣ ನಡೆಯುತ್ತಲೇ, ಸುಮಾರು 700 ಪದಗಳ ಈ ಆದೇಶಕ್ಕೆ ಮೊಹರೆ ಒತ್ತಿದ್ದಾರೆ.

ADVERTISEMENT

ಆದರೆ ಈ ಹಕ್ಕು, ಅಮೆರಿಕ ಸಂವಿಧಾನದಲ್ಲಿಯೇ ಅಡಕವಾಗಿರುವ ಕಾರಣ ಇದನ್ನು ರದ್ದುಪಡಿಸುವ ಆದೇಶ ಊರ್ಜಿತವಾಗುವುದು ಅನುಮಾನ ಎನ್ನಲಾಗಿದೆ. ಇದರ ಜೊತೆಗೆ ಅಧ್ಯಕ್ಷರ ಈ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಕೋರ್ಟ್ ಮೆಟ್ಟಿಲೇರಿದ್ದಾರೆ

ಹಾಗಾದರೆ ಹುಟ್ಟಿನಿಂದಾಗಿ ಸಿಗುವ ಪೌರತ್ವ ಎಂದರೇನು?

ಯಾರಾದರೂ ಅಮೆರಿಕದಲ್ಲಿ ಜನಿಸಿದರೆ ಅವರು ಅಮೆರಿಕದ ಪ್ರಜೆ. ಇಲ್ಲಿ ಪೋಷಕರ ವಲಸೆ ಸ್ಥಿತಿಗತಿ ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ಪ್ರವಾಸಿ ವೀಸಾ ಅಥವಾ ಇನ್ಯಾವುದೇ ರೀತಿಯ ವೀಸಾ ಇರುವ ಭಾರತೀಯ ವ್ಯಕ್ತಿ ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡಿದರೆ, ಆ ಮಗು ಅಧಿಕೃತವಾಗಿ ಅಮೆರಿಕದ ಪ್ರಜೆ. ಅದರ ಪೋಷಕರನ್ನು ನಾಗರಿಕನ ಪೋಷಕರೆಂದು ಪರಿಗಣಿಸಲಾಗುತ್ತದೆ.

ಇದು ಸಂವಿಧಾನದಲ್ಲೇ ಅಡಕವಾಗಿದ್ದು, 14ನೇ ತಿದ್ದುಪಡಿ ಮೂಲಕ ಈ ಪೌರತ್ವದ ಹಕ್ಕು ನೀಡಲಾಗಿದೆ. ಟ್ರಂಪ್ ಹಾಗೂ ಬೆಂಬಲಿಗರಿಗೆ ಈ ತಿದ್ದುಪಡಿಯ ಬಗ್ಗೆ ಅಸಮಾಧಾನ ಇದ್ದು, ಪೌರತ್ವ ಪಡೆಯಲು ಕಠಿಣ ನಿಯಮ ಇರಬೇಕು ಎನ್ನುವುದು ಅವರ ನಿಲುವು.

14ನೇ ತಿದ್ದುಪಡಿಯನ್ನು 1868ರಲ್ಲಿ ಅಂಗೀಕರಿಸಲಾಯಿತು. ನಾಗರಿಕ ಯುದ್ಧ ಈ ತಿದ್ದುಪಡಿಗೆ ಕಾರಣವಾಯಿತು. ಇದರ ಪ್ರಕಾರ, ‘ಅಮೆರಿಕ ಹಾಗೂ ಅದರ ಅಧಿಕಾರ ವ್ಯಾಪ್ತಿಗೆ ಒಳಪಟ್ಟ ಸ್ಥಳಗಳಲ್ಲಿ ಜನಿಸಿದ ಎಲ್ಲಾ ವ್ಯಕ್ತಿಗಳು ಅಮೆರಿಕ ಹಾಗೂ ಅವರು ವಾಸಿಸುವ ರಾಜ್ಯದ ಪ್ರಜೆಗಳು’.

ಟ್ರಂಪ್ ಆದೇಶ ಹೇಳುವುದೇನು?

ಟ್ರಂಪ್‌ ಅವರ ಹೊಸ ಆದೇಶದಿಂದಾಗಿ, ಹುಟ್ಟಿನಿಂದಲೇ ಸ್ವಯಂಚಾಲಿತವಾಗಿ ಪೌರತ್ವ ದತ್ತವಾಗುವುದಿಲ್ಲ.

ಮಗುವಿನ ತಾಯಿ ಕಾನೂನುಬದ್ಧವಾಗಿ ಅಮೆರಿಕದಲ್ಲಿ ಇಲ್ಲದಿದ್ದರೆ ಅಥವಾ ತಂದೆ ಕಾನೂನು ಬದ್ಧವಾಗಿ ಅಮೆರಿಕದ ಖಾಯಂ ನಿವಾಸಿ ಆಗಿರದಿದ್ದರೆ ಅಂಥವರಿಗೆ ಹುಟ್ಟಿನಿಂದಲೇ ಪೌರತ್ವ ಪ್ರಾಪ್ತವಾಗುವುದಿಲ್ಲ.

ತಾಯಿ ಕಾನೂನುಬದ್ಧವಾಗಿ ಅಮೆರಿಕದ ಖಾಯಂ ನಿವಾಸಿಯಾಗಿದ್ದು, ತಂದೆ ತಾತ್ಕಾಲಿಕ ನಾಗರಿಕನಾಗಿದ್ದರೆ ಅಂಥವರು ಹುಟ್ಟಿನಿಂದಾಗಿ ಸಿಗುವ ಪೌರತ್ವಕ್ಕೆ ಅರ್ಹರಲ್ಲ.

ಭಾರತೀಯರಿಗೆ ಏನು ಸಮಸ್ಯೆ?

ಟ್ರಂಪ್ ಅವರ ಈ ಹೊಸ ನೀತಿಯಿಂದಾಗಿ ಎಚ್‌–1ಬಿ ವಿಸಾ, ಗ್ರೀನ್ ಕಾರ್ಡ್, ತಾತ್ಕಾಲಿಕ ವಿಸಾ, ವಿದ್ಯಾರ್ಥಿ ವಿಸಾ, ಪ್ರವಾಸಿ ವಿಸಾ ಹಾಗೂ ದಾಖಲೆ ಇಲ್ಲದ ಭಾರತೀಯ ವಲಸಿಗರಿಗೆ ಇದರಿಂದ ಸಮಸ್ಯೆ ಆಗಲಿದೆ. ಇದರಿಂದಾಗಿ ಅಮೆರಿಕದಲ್ಲಿ ಅವಕಾಶ ಅರಸುತ್ತಿರುವ ಭಾರತದ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕುಟುಂಬಗಳಿಗೆ ಸಮಸ್ಯೆ ಆಗಲಿದೆ. ಅವರೆಲ್ಲರೂ ಕೆನಡಾ ಅಥವಾ ಆಸ್ಟ್ರೇಲಿಯಾವನ್ನು ಆಯ್ದುಕೊಳ್ಳಬಹುದು.

ಅಮೆರಿಕದ ಜನಸಂಖ್ಯಾ ಬ್ಯೂರೊದ ಮಾಹಿತಿ ಅನ್ವಯ, 2024ರಲ್ಲಿ ಅಮೆರಿಕದಲ್ಲಿ 54 ಲಕ್ಷ ಭಾರತೀಯರಿದ್ದಾರೆ. ಇದು ಅಮೆರಿಕ ಜನಸಂಖ್ಯೆಯ ಶೇ 1.47ರಷ್ಟು.

(ವಿವಿಧ ಮೂಲಗಳನ್ನು ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.