ADVERTISEMENT

ಮೆಕ್ಸಿಕೊ, ಕೆನಡಾ, ಚೀನಾಗೆ ತೆರಿಗೆ ವಿಧಿಸುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ

ಏಜೆನ್ಸೀಸ್
Published 2 ಫೆಬ್ರುವರಿ 2025, 2:53 IST
Last Updated 2 ಫೆಬ್ರುವರಿ 2025, 2:53 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ಮೆಕ್ಸಿಕೊ, ಕೆನಡಾ ಹಾಗೂ ಚೀನಾದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಸಹಿ ಹಾಕಿದ್ದಾರೆ. ಈ ಮೂರು ರಾಷ್ಟ್ರಗಳೊಂದಿಗೆ ಅಮೆರಿಕಕ್ಕೆ ದೀರ್ಘಕಾಲಿನ ವ್ಯಾಪಾರ ಸಂಬಂಧವಿದ್ದು, ಮತ್ತೊಂದು ಜಾಗತಿಕ ವ್ಯಾ‍ಪಾರ ಯುದ್ಧಕ್ಕೆ ಮುನ್ನುಡಿ ಬರೆಯುವ ಆತಂಕ ಎದುರಾಗಿದೆ.

ADVERTISEMENT

ಕೆನಡಾ ಹಾಗೂ ಮೆಕ್ಸಿಕೊದ ಎಲ್ಲಾ ಬಗೆ ಉತ್ಪನ್ನಗಳ ಮೇಲೆ ಶೇ 25 ರಷ್ಟು ತೆರಿಗೆ ಹೇರಲಾಗಿದೆ. ಕೆನಡಾದ ಇಂಧನ ಹಾಗೂ ತೈಲ ಉತ್ಪನ್ನಗಳ ಮೇಲೆ ಶೇ 10 ಸುಂಕ ವಿಧಿಸಲಾಗಿದೆ. ಚೀನಾದ ಉತ್ಪನ್ನಗಳ ಮೇಲೆ ಶೇ 10ರಷ್ಟು ಸುಂಕ ಹೇರುವ ಆದೇಶದಕ್ಕೆ ಟ್ರಂಪ್ ಸಹಿ ಬಿದ್ದಿದೆ.

ಮಂಗಳವಾರ ಮಧ್ಯರಾತ್ರಿಯಿಂದ ಈ ಹೊಸ ಸುಂಕ ಅನ್ವಯವಾಗಲಿದ್ದು, ಹಾಲಿ ಇರುವ ತೆರಿಗೆ ಜೊತೆಗೆ ಹೊಸದನ್ನೂ ವಿಧಿಸಲಾಗುತ್ತದೆ.

ಅಮೆರಿಕಕ್ಕೆ ಅಕ್ರಮ ವಲಸಿಗರು ಹಾಗೂ ಫೆಂಟನಲ್ ಬರುವುದು ನಿಲ್ಲುವವರೆಗೂ ಈ ಸುಂಕ ಜಾರಿಯಲ್ಲಿರಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಸುಂಕ ಇಳಿಸಲು ಯಾವ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಗಡಿ ಮೂಲಕ ಅಮೆರಿಕಕ್ಕೆ ವಲಸಿಗರು ನುಸುಳದಂತೆ ಮೆಕ್ಸಿಕೊ ಹಾಗೂ ಕೆನಡಾ ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿವೆ. ಇದರಿಂದಾಗಿ ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ದಾಟುತ್ತಿರುವವರ ಸಂಖ್ಯೆ 2020ಕ್ಕೆ ಹೋಲಿಕೆ ಮಾಡಿದರೆ ಭಾರಿ ಇಳಿಕೆಯಾಗಿದೆ. ಆದರೆ ಟ್ರಂಪ್ ಮೊದಲ ಅವಧಿಗಿಂತ ಹೆಚ್ಚು. ಅಮೆರಿಕಕ್ಕೆ ಫೆಂಟನಿಲ್ ಸರಬರಾಜಾಗುವುದನ್ನು ತಡೆಯಲು ಮೆಕ್ಸಿಕೊ ಕೂಡ ಕ್ರಮ ತೆಗೆದುಕೊಂಡಿದೆ. ಭಾರಿ ಪ್ರಮಾಣದ ಫೆಂಟನಿಲ್‌ ಜಪ್ತಿ ಮಾಡಿದೆ.

ಗಡಿಯಲ್ಲಿ ಕೆನಡಾ ಹೆಲಿಕಾಪ್ಟರ್‌, ಡ್ರೋನ್ ಹಾಗೂ ಜಾರಿ ಅಧಿಕಾರಿಗಳನ್ನು ನಿಯೋಜಿಸಿ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದೆ. ಇದರ ನಡುವೆಯೂ ಟ್ರಂಪ್ ಸುಂಕ ಹೇರಿದ್ದಾರೆ.

ತೆರಿಗೆ ವಿಧಿಸುವ ಟ್ರಂಪ್ ಬೆದರಿಕೆ ಹೊರತಾಗಿಯೂ ಚೀನಾ ಏನು ಕ್ರಮ ಕೈಗೊಂಡಿದೆ ಎನ್ನುವುರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಈ ಹೊಸ ತೆರಿಗೆ ಹೇರಿಕೆಯಿಂದಾಗಿ ಈ ಮೂರು ದೇಶಗಳ ಉತ್ಪನ್ನಗಳ ಬೆಲೆ ಏರಿಕೆಯಾಗಲಿದೆ. ಅಮೆರಿಕದ ಮೂರನೇ ಒಂದು ಪ್ರಮಾಣದಷ್ಟು ಆಮದು ಈ ರಾಷ್ಟ್ರಗಳಿಂದಲೇ ಆಗುತ್ತವೆ. ಕಾರು, ಔಷಧ, ಶೂ, ಟಿಂಬರ್, ಎಲೆಕ್ಟ್ರಾನಿಕ್ಸ್‌, ಸ್ಟೀಲ್ ಹಾಗೂ ಇನ್ನಿತರ ವಸ್ತುಗಳು ಈ ದೇಶಗಳಿಂದ ಅಮೆರಿಕಕ್ಕೆ ಆಮದಾಗುತ್ತವೆ. ಈ ಹೊಸ ತೆರಿಗೆಯಿಂದಾಗಿ ಹಣದುಬ್ಬರದ ಉಂಟಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.