
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕದಲ್ಲಿ ಮಾರಾಟವಾಗುವ ಕೆನಡಾದ ವಿಮಾನಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈ ಮೂಲಕ ‘ಸುಂಕ’ ಸಮರ ಮುಂದುವರಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ‘ಅಮೆರಿಕದ ವಿಮಾನ ತಯಾರಕ ಕಂಪನಿ ಗಲ್ಫ್‌ಸ್ಟ್ರೀಮ್ ಏರೋಸ್ಪೇಸ್ ತಯಾರಿಸಿದ ವಿಮಾನಗಳನ್ನು ಕೆನಡಾ ತಕ್ಷಣ ಪ್ರಮಾಣೀಕರಿಸದ ಹೊರತು ಈ ಕ್ರಮ ಜಾರಿ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ಗಲ್ಫ್‌ಸ್ಟ್ರೀಮ್ 500, 600, 700 ಮತ್ತು 800 ಜೆಟ್‌ಗಳನ್ನು ಪ್ರಮಾಣೀಕರಿಸಲು ಕೆನಡಾ ತಪ್ಪಾಗಿ, ಕಾನೂನುಬಾಹಿರವಾಗಿ ನಿರಾಕರಿಸಿದೆ ಎಂಬ ಅಂಶವನ್ನು ಆಧರಿಸಿ ಟ್ರಂಪ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
‘ಅಮೆರಿಕವು ಕೆನಡಾದ ಪ್ರಮುಖ ಗ್ಲೋಬಲ್ ಎಕ್ಸ್‌ಪ್ರೆಸ್ ಜೆಟ್‌ಗಳು ಸೇರಿದಂತೆ ಬೊಂಬಾರ್ಡಿಯರ್ ವಿಮಾನಗಳ ಪ್ರಮಾಣೀಕರಣ ರದ್ದುಗೊಳಿಸುವ ಮೂಲಕ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ನಮ್ಮ ದೇಶದ ‘ಗಲ್ಫ್‌ಸ್ಟ್ರೀಮ್’ ಕಂಪನಿ ತಯಾರಿಸಿದ ವಿಮಾನಗಳನ್ನು ಪ್ರಮಾಣೀಕರಿಸದ ಹೊರತು ನಾವು ಕೆನಡಾದಲ್ಲಿ ತಯಾರಿಸಿದ ಎಲ್ಲಾ ವಿಮಾನಗಳನ್ನು ಪ್ರಮಾಣೀಕರಣ ರದ್ದುಗೊಳಿಸುತ್ತೇವೆ’ ಎಂದಿದ್ದಾರೆ.
ಕೆನಡಾ ತನ್ನ ದೇಶೀಯ ಮಾರುಕಟ್ಟೆಯಲ್ಲಿ ಪ್ರಮಾಣೀಕರಣ ಪ್ರಕ್ರಿಯೆಯ ಮೂಲಕ ‘ಗಲ್ಫ್‌ಸ್ಟ್ರೀಮ್’ ತಯಾರಿಸಿದ ವಿಮಾನಗಳ ಮಾರಾಟವನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.
ಭಾರತದ ಮೇಲೂ ‘ಸುಂಕ’ ಪ್ರಹಾರ
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾದ ನಂತರದಲ್ಲಿ, ಭಾರತದಿಂದ ಆಮದು ಆಗುವ ಸರಕುಗಳಿಗೆ ಶೇಕಡ 50ರಷ್ಟು ಸುಂಕ ವಿಧಿಸಿದ್ದಾರೆ. ಈ ಪೈಕಿ ಶೇ 25ರಷ್ಟು ‘ಪ್ರತಿಸುಂಕ’ದ ರೀತಿಯಲ್ಲಿದೆ. ಇನ್ನುಳಿದ ಶೇ 25ರಷ್ಟು ಸುಂಕವನ್ನು, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದೆ ಎಂಬ ಕಾರಣಕ್ಕೆ ಹೇರಲಾಗಿದೆ.
ಇದೇ ವಿಚಾರಕ್ಕೆ ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ನನೆಗುದಿಗೆ ಬಿದ್ದಿದೆ. ಈ ಸಂಬಂಧ ಉಭಯ ದೇಶಗಳು ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೂ ಫಲಪ್ರದವಾಗಿಲ್ಲ. ‘ಭಾರತ–ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ’ ಎಂದು ಟ್ರಂಪ್ ಹೇಳಿಕೊಂಡ ಬಳಿಕ ಮತ್ತು ಅಮೆರಿಕವು ನೂತನ ವಲಸೆ ನೀತಿ ಜಾರಿಗೊಳಿಸಿದ ನಂತರ ಉಭಯ ದೇಶಗಳ ನಡುವಣ ಸಂಬಂಧದಲ್ಲಿ ಬಿರುಕು ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.