ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಹೊಸದಾಗಿ ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಭಾನುವಾರ ಬೆದರಿಕೆಯೊಡ್ಡಿದ್ದಾರೆ.
ʼಎನ್‌ಬಿಸಿʼ ಸುದ್ದಿಸಂಸ್ಥೆಗೆ ದೂರವಾಣಿ ಸಂದರ್ಶನ ನೀಡಿರುವ ಟ್ರಂಪ್, ಅಮೆರಿಕ ಹಾಗೂ ಇರಾನ್ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ.
ʼಒಂದುವೇಳೆ ಅವರೇನಾದರೂ (ಇರಾನ್) ಒಪ್ಪಂದಕ್ಕೆ ಬರದಿದ್ದರೆ, ಬಾಂಬ್ ದಾಳಿ ನಡೆಯಲಿದೆʼ ಎಂದಿರುವ ಟ್ರಂಪ್, ʼನಾಲ್ಕು ವರ್ಷಗಳ ಹಿಂದೆ (ಮೊದಲ ಸಲ ಅಮೆರಿಕ ಅಧ್ಯಕ್ಷರಾಗಿದ್ದಾಗ) ವಿಧಿಸಿದಂತೆ ಹೆಚ್ಚುವರಿ ಸುಂಕ ವಿಧಿಸಲಾಗುವುದುʼ ಎಂದೂ ಎಚ್ಚರಿಸಿದ್ದಾರೆ.
2017-21ರ ಅವಧಿಯಲ್ಲಿ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದ ಟ್ರಂಪ್, ಇರಾನ್ ಹಾಗೂ ವಿಶ್ವದ ಪ್ರಮುಖ ರಾಷ್ಟ್ರಗಳ ನಡುವೆ 2015ರಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದದಿಂದ ಹಿಂದೆ ಸರಿದಿದ್ದರು. ಈ ಒಪ್ಪಂದವು, ಇರಾನ್ ಮೇಲೆ ನಿರ್ಬಂಧ ಹೇರುವ ಬದಲಾಗಿ, ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಠಿಣವಾದ ಕಟ್ಟುಪಾಡುಗಳನ್ನಷ್ಟೇ ವಿಧಿಸುತ್ತದೆ ಎಂಬುದು ಅದಕ್ಕೆ ಕಾರಣವಾಗಿತ್ತು.
ಅದಾದ ನಂತರ, ಪರಮಾಣು ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹೆಚ್ಚಿಸಿದ ಇರಾನ್, ʼಒಪ್ಪಂದ ಮಾಡಿಕೊಳ್ಳಿ. ಇಲ್ಲದಿದ್ದರೆ, ಮಿಲಿಟರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆʼ ಎಂಬ ಟ್ರಂಪ್ ಬೆದರಿಕೆಗಳಿಗೆ ಸೊಪ್ಪು ಹಾಕಿಲ್ಲ.
ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಗುಪ್ತ ಕಾರ್ಯಸೂಚಿ ಇರಾನ್‌ನದ್ದು ಎಂದು ಪಾಶ್ಚಾತ್ಯ ರಾಷ್ಟ್ರಗಳು ಆರೋಪಿಸುತ್ತಾ ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.