
ನಿಕೊಲಸ್ ಮಡೂರೊ ಅವರ ಬೆಂಬಲಿಗರು ಕರಾಕಸ್‌ನಲ್ಲಿ ರ್‍ಯಾಲಿ ನಡೆಸಿದರು
–ಎಎಫ್‌ಪಿ ಚಿತ್ರ
ನ್ಯೂಯಾರ್ಕ್: ‘ನಾವು ಬಯಸಿದ ರೀತಿಯಲ್ಲಿ ಆಡಳಿತ ನಡೆಸದಿದ್ದರೆ ಭಾರಿ ತೆಲೆ ತೆರಬೇಕಾಗುತ್ತದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ‘ಅಮೆರಿಕದ ಆಶಯಗಳಿಗೆ ಮಣಿಯದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ. ಬಹುಶಃ ನಿಕೊಲಸ್ ಮಡೂರೊ ಅವರಿಗೆ ಆದ ಪರಿಸ್ಥಿತಿಗಿಂತಲೂ ಕೆಟ್ಟ ಸ್ಥಿತಿ ಎದುರಿಸಬೇಕಾದೀತು’ ಎಂದು ಎಚ್ಚರಿಸಿದ್ದಾರೆ. ‘ನಾವು ಬಯಸಿದ್ದನ್ನು ವೆನೆಜುವೆಲಾ ಮಾಡಿದರೆ ಅಮೆರಿಕವು ಅಲ್ಲಿ ಸೇನೆಯನ್ನು ನಿಯೋಜಿಸುವ ಅಗತ್ಯವಿಲ್ಲ’ ಎಂದೂ ಹೇಳಿದ್ದಾರೆ.
ಟ್ರಂಪ್ ಅವರು ಎಚ್ಚರಿಕೆ ನೀಡಿದ ಕೆಲ ಗಂಟೆಗಳಲ್ಲೇ ಡೆಲ್ಸಿ ಅವರು ಅಮೆರಿಕದ ಬಗ್ಗೆ ತಾವು ಹೊಂದಿದ್ದ ಕಠಿಣ ನಿಲುವನ್ನು ಅಲ್ಪ ಸಡಿಲಿಸಿದ್ದಾರೆ.
‘ಪರಸ್ಪರ ಸಹಕಾರಕ್ಕಾಗಿ ಕಾರ್ಯಸೂಚಿ ಸಿದ್ಧಪಡಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಅಮೆರಿಕ ಸರ್ಕಾರಕ್ಕೆ ಆಹ್ವಾನ ನೀಡುತ್ತೇವೆ’ ಎಂದು ಡೆಲ್ಸಿ ಭಾನುವಾರ ರಾತ್ರಿ ಹೇಳಿದ್ದಾರೆ. ಇದು ವೆನೆಜುವೆಲಾದಲ್ಲಿ ಆಡಳಿತದ ಸುಗಮ ವರ್ಗಾವಣೆ ಬಯಸಿರುವ ಅಮೆರಿಕಕ್ಕೆ ದೊರೆತ ‘ಆರಂಭಿಕ ಗೆಲುವು’ ಎಂದೇ ವಿಶ್ಲೇಷಿಸಲಾಗಿದೆ.
ಅಮೆರಿಕದ ಸೇನಾ ಕಾರ್ಯಾಚರಣೆಯನ್ನು ಶನಿವಾರ ಖಂಡಿಸಿದ್ದ ಡೆಲ್ಸಿ, ‘ಮಡೂರೊ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದರು.
ರಾಡ್ರಿಗಸ್ ಅವರಿಂದ ನೀವು ಏನು ಬಯಸುವಿರಿ ಎಂಬ ಪ್ರಶ್ನೆಗೆ ಟ್ರಂಪ್, ‘ವೆನೆಜುವೆಲಾದ ಎಲ್ಲ ಕಡೆಗೂ ನಮಗೆ ಮುಕ್ತ ಪ್ರವೇಶ ಸಿಗಬೇಕು. ಅವರ ದೇಶವನ್ನು ಪುನರ್‌ನಿರ್ಮಿಸಲು ಅವಕಾಶವಾಗುವಂತೆ ತೈಲ ನಿಕ್ಷೇಪ ಮತ್ತು ಇತರ ಸಂಪನ್ಮೂಲಗಳ ಮೇಲಿನ ಹಿಡಿತ ನಮ್ಮದಾಗಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರು: ಮಡೂರೊ ಹಾಗೂ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ ನ್ಯೂಯಾರ್ಕ್‌ನ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಯಿತು.
ಅಮೆರಿಕ ಸೇನೆ ಶುಕ್ರವಾರ ತಡರಾತ್ರಿ ವೆನೆಜುವೆಲಾದ ರಾಜಧಾನಿ ಕರಾಕಸ್ ಮೇಲೆ ವಾಯುದಾಳಿ ನಡೆಸಿ ಮಡೂರೊ ಹಾಗೂ ಪತ್ನಿಯನ್ನು ಹಿಡಿದು ತನ್ನ ದೇಶಕ್ಕೆ ಒಯ್ದಿತ್ತು. ಇಬ್ಬರನ್ನೂ ನ್ಯೂಯಾರ್ಕ್‌ನ ಬ್ರೂಕ್ಲಿನ್ ಜೈಲಿನಲ್ಲಿಡಲಾಗಿದೆ. ಮಾದಕದ್ರವ್ಯ ಭಯೋತ್ಪಾದನೆ ಸೇರಿದಂತೆ ಹಲವು ಆರೋಪಗಳನ್ನು ಮಡೂರೊ ವಿರುದ್ಧ ಹೊರಿಸಲಾಗಿದೆ.
ಡೆಲ್ಸಿ ರಾಡ್ರಿಗಸ್ ಅವರಿಗೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸುವಂತೆ ವೆನಿಜುವೆಲಾದ ಸುಪ್ರೀಂ ಕೋರ್ಟ್ ಶನಿವಾರ ರಾತ್ರಿ ಆದೇಶಿಸಿತ್ತು. ಅಲ್ಲಿನ ಸೇನೆಯು ಅದಕ್ಕೆ ಅನುಮೋದನೆ ನೀಡುವುದಾಗಿ ಹೇಳಿತ್ತು.
ಪ್ರಮುಖ ಅಂಶಗಳು
* ನಿಕೊಲಸ್ ಮಡೂರೊ ಅವರನ್ನು ಸೋಮವಾರ ನ್ಯೂಯಾರ್ಕ್‌ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು
* ವೆನೆಜುವೆಲಾ ಮನವಿಯಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೋಮವಾರ ತುರ್ತು ಸಭೆ ನಡೆಸಿದೆ
* ಮಡೂರೊ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಚೀನಾ ಒತ್ತಾಯಿಸಿದೆ
* ಕರಾಕಸ್‌ನಲ್ಲಿ ಮಡೂರೊ ಅವರ ಸುಮಾರು 2000 ಬೆಂಬಲಿಗರು ಬಂದೂಕು ಹಿಡಿದು ದ್ವಿಚಕ್ರ ವಾಹನಗಳಲ್ಲಿ ರ್‍ಯಾಲಿ ನಡೆಸಿದರು
ಗ್ರೀನ್‌ಲ್ಯಾಂಡ್ ವಶಕ್ಕೆ: ಟ್ರಂಪ್ ಪುನರುಚ್ಚಾರ
ಕೋಪನ್‌ಹೇಗನ್: ‘ಗ್ರೀನ್‌ಲ್ಯಾಂಡ್ ತನ್ನ ಭಾಗವಾಗಬೇಕು’ ಎಂಬ ಹೇಳಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ವೆನೆಜುವೆಲಾದಲ್ಲಿ ಸೇನಾ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಇದೀಗ ಗ್ರೀನ್‌ಲ್ಯಾಂಡ್ ವಶಪಡಿಸುವ ಕುರಿತ ಟ್ರಂಪ್ ಹೇಳಿಕೆಯನ್ನು ವಿವಿಧ ದೇಶಗಳು ಖಂಡಿಸಿವೆ. ‘ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಗ್ರೀನ್‌ಲ್ಯಾಂಡ್ ನಮಗೆ ಸೇರುವ ಅಗತ್ಯವಿದೆ. ಗ್ರೀನ್‌ಲ್ಯಾಂಡ್ ಅನ್ನು ರಕ್ಷಿಸಲು ಡೆನ್ಮಾರ್ಕ್ ಸಾಕಷ್ಟು ಕೆಲಸ ಮಾಡುತ್ತಿಲ್ಲ’ ಎಂದು ಟ್ರಂಪ್ ಅವರು ಭಾನುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
‘ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ವಿಚಾರದಲ್ಲಿ ಇನ್ನೆರಡು ತಿಂಗಳಲ್ಲಿ ಚಿಂತಿಸುತ್ತೇವೆ’ ಎಂದೂ ಹೇಳಿದ್ದಾರೆ. ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್ ದೇಶದ ಗಡಿಯೊಳಗಿರುವ ಸ್ವಾಯತ್ತ ದ್ವೀಪ ಪ್ರದೇಶವಾಗಿದೆ. ಖಂಡನೆ: ಗ್ರೀನ್‌ಲ್ಯಾಂಡ್ ಪ್ರಧಾನಿ ಯೆನ್ಸ್ ಫ್ರೆಡೆರಿಕ್ ನೀಲ್ಸೆನ್ ಮತ್ತು ಡೆನ್ಮಾರ್ಕ್ ಪ್ರಧಾನಿ ಮೆಟೆ ಫ್ರೆಡ್ರಿಕ್ಸನ್ ಅವರು ಟ್ರಂಪ್ ಹೇಳಿಕೆಯನ್ನು ಖಂಡಿಸಿದ್ದಾರೆ. ‘ಇದು ಅತಿಯಾಯಿತು. ಪದೇ ಪದೇ ವಶಪಡಿಸಿಕೊಳ್ಳುವ ಮಾತನ್ನಾಡಿ ಒತ್ತಡ ಹೇರುವುದನ್ನು ಅಮೆರಿಕ ನಿಲ್ಲಿಸಲಿ’ ಎಂದು ನೀಲ್ಸೆನ್ ಅವರು ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ನಾವು ಮಾತುಕತೆ ಸಂವಾದಕ್ಕೆ ಮುಕ್ತರಾಗಿದ್ದೇವೆ. ಆದರೆ ಮಾತುಕತೆಯು ಸರಿಯಾದ ಮಾರ್ಗದಲ್ಲಿ ಅಂತರರಾಷ್ಟ್ರೀಯ ಕಾನೂನಿನ ಪ್ರಕಾರವೇ ನಡೆಯಲಿ’ ಎಂದಿದ್ದಾರೆ. ಅಮೆರಿಕವು ಗ್ರೀನ್‌ಲ್ಯಾಂಡ್‌ಗೆ ‘ಬೆದರಿಕೆ’ ಹಾಕುವುದನ್ನು ನಿಲ್ಲಿಸಬೇಕು ಎಂದು ಮೆಟೆ ಫ್ರೆಡ್ರಿಕ್ಸನ್ ಹೇಳಿದ್ದಾರೆ. ‘ನಾನು ಒಂದು ವಿಷಯವನ್ನು ಅಮೆರಿಕಕ್ಕೆ ಸ್ಪಷ್ಟಪಡಿಸಲು ಬಯಸುತ್ತೇನೆ. ಗ್ರೀನ್‌ಲ್ಯಾಂಡ್‌ನ ಮೇಲೆ ಹಿಡಿತ ಸಾಧಿಸಬೇಕು ಎಂದು ಅಮೆರಿಕವು ಹೇಳುವುದು ಸಂಪೂರ್ಣವಾಗಿ ಅಸಂಬದ್ಧ’ ಎಂದು ಭಾನುವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಫ್ರೆಡ್ರಿಕ್ಸನ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ‘ಗ್ರೀನ್‌ಲ್ಯಾಂಡ್‌ನ ಭವಿಷ್ಯವನ್ನು ಗ್ರೀನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ಮಾತ್ರ ನಿರ್ಧರಿಸಬೇಕು’ ಎಂದಿದ್ದಾರೆ.
ಗ್ರೀನ್‌ಲ್ಯಾಂಡ್ ಅಪರೂಪದ ಲೋಹಗಳ ದೊಡ್ಡ ನಿಕ್ಷೇಪಗಳನ್ನು ಹೊಂದಿರುವ ಭೂಪ್ರದೇಶ. ಹಾಗಾಗಿ ಆ ಪ್ರದೇಶ ತನ್ನದಾಗಬೇಕು ಎಂದು ಅಮೆರಿಕ ಬಯಸುತ್ತಿದೆ. ಗ್ರೀನ್‌ಲ್ಯಾಂಡ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬಗ್ಗೆ ಬಗ್ಗೆ ಟ್ರಂಪ್ ಈ ಹಿಂದೆಯೂ ಮಾತನಾಡಿದ್ದರು. ‘ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ’ ಎಂದು ಡೆನ್ಮಾರ್ಕ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು.
ಕ್ಯೂಬಾದ 32 ಅಧಿಕಾರಿಗಳು ಸಾವು
ಹವಾನಾ: ಅಮೆರಿಕವು ವೆನೆಜುವೆಲಾದ ರಾಜಧಾನಿ ಕರಾಕಸ್ ಮೇಲೆ ನಡೆಸಿದ ವಾಯುದಾಳಿಯಲ್ಲಿ ತನ್ನ ದೇಶದ 32 ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಕ್ಯೂಬಾ ಸರ್ಕಾರ ಹೇಳಿದೆ. ಅಮೆರಿಕದ ದಾಳಿಯಿಂದ ಸಾವು ಸಂಭವಿಸಿರುವುದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿರುವುದು ಇದೇ ಮೊದಲು. ವೆನೆಜುವೆಲಾ ಸರ್ಕಾರದ ಕೋರಿಕೆಯ ಮೇರೆಗೆ ಕಾರ್ಯಾಚರಣೆಯೊಂದರಲ್ಲಿ ಪಾಲ್ಗೊಳ್ಳಲು ಕ್ಯೂಬಾದ ಪೊಲೀಸ್ ಮತ್ತು ಸೇನೆಯ ಅಧಿಕಾರಿಗಳು ಕರಾಕಸ್‌ಗೆ ಬಂದಿದ್ದರು ಎಂದು ಕ್ಯೂಬಾದ ಸರ್ಕಾರಿ ವಾಹಿನಿ ಭಾನುವಾರ ರಾತ್ರಿ ವರದಿ ಮಾಡಿದೆ. ದಕ್ಷಿಣ ಅಮೆರಿಕದ ರಾಷ್ಟ್ರದಲ್ಲಿ ಕ್ಯೂಬಾದ ಅಧಿಕಾರಿಗಳು ಯಾವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ವೆನೆಜುವೆಲಾದ ಆಪ್ತ ಮಿತ್ರ ರಾಷ್ಟ್ರವಾದ ಕ್ಯೂಬಾ ವಿವಿಧ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ತನ್ನಸೇನೆ ಮತ್ತು ಪೊಲೀಸ್ ಪಡೆಗಳನ್ನು ಹಲವು ಸಲ ಆ ದೇಶಕ್ಕೆ ಕಳುಹಿಸಿದೆ. ದಾಳಿಯಲ್ಲಿ ತನ್ನ ನಾಗರಿಕರು ಮತ್ತು ಸೈನಿಕರು ಮೃತಪಟ್ಟಿದ್ದಾರೆ ಎಂದು ವೆನೆಜುವೆಲಾ ಹೇಳಿದ್ದರೂ ಬಲಿಯಾದವರ ನಿಖರ ಸಂಖ್ಯೆಯನ್ನು ಇದುವರೆಗೂ ನೀಡಿಲ್ಲ.
‘ಕ್ಯೂಬಾ ಪತನ ಸನ್ನಿಹಿತ’
‘ಕ್ಯೂಬಾ ಪತನಗೊಳ್ಳಲು ಸಿದ್ಧವಾಗಿರುವಂತೆ ಕಾಣುತ್ತಿದೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆ ಮೂಲಕ ತನ್ನ ಆಡಳಿತವು ಕಮ್ಯುನಿಸ್ಟ್ ಆಡಳಿತವಿರುವ ದ್ವೀಪದತ್ತ ಚಿತ್ತ ಹರಿಸಲಿದೆ ಎಂಬ ಸೂಚನೆ ನೀಡಿದ್ದಾರೆ. ‘ಕ್ಯೂಬಾಕ್ಕೆ ಈಗ ಯಾವುದೇ ಆದಾಯ ಇಲ್ಲ. ಅವರು ಎಲ್ಲ ಆದಾಯವನ್ನು ವೆನೆಜುವೆಲಾದ ತೈಲದಿಂದ ಪಡೆಯುತ್ತಿದ್ದರು. ಇದೀಗ ವೆನೆಜುವೆಲಾಕ್ಕೆ ಎದುರಾಗಿರುವ ಪರಿಸ್ಥಿತಿ ಕ್ಯೂಬಾವನ್ನು ಸಂಕಷ್ಟಕ್ಕೆ ತಳ್ಳಲಿದೆ. ಆ ದೇಶದವರು ಈ ಆಘಾತವನ್ನು ಹೇಗೆ ತಾಳಿಕೊಳ್ಳುವರೋ... ನನಗೆ ತಿಳಿಯುತ್ತಿಲ್ಲ’ ಎಂದಿದ್ದಾರೆ. ಕ್ಯೂಬಾದಲ್ಲಿ ಅಮೆರಿಕವು ಸೇನಾ ಕಾರ್ಯಾಚರಣೆ ನಡೆಸಲಿದೆಯೇ ಎಂಬ ಪ್ರಶ್ನೆಗೆ ‘ಅದರ ಅಗತ್ಯವಿದೆ ಎಂದು ಭಾವಿಸುವುದಿಲ್ಲ. ಏಕೆಂದರೆ ಆ ದೇಶ ತಾನಾಗಿಯೇ ಪತನಗೊಳ್ಳಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.