ADVERTISEMENT

ಬೈಡನ್‌ಗೆ 'ಉದಾತ್ತ ಪತ್ರ' ಬರೆದಿಟ್ಟು ನಿರ್ಗಮಿಸಿದ ಡೊನಾಲ್ಡ್ ಟ್ರಂಪ್

ಪಿಟಿಐ
Published 21 ಜನವರಿ 2021, 5:12 IST
Last Updated 21 ಜನವರಿ 2021, 5:12 IST
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಶ್ವೇತಭವನ ಬಿಟ್ಟು ಹೋಗುವ ಮುನ್ನ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮಗಾಗಿ ಬಹಳ 'ಉದಾತ್ತ ಪತ್ರ' ಬರೆದಿಟ್ಟು ಹೋಗಿರುವುದಾಗಿ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ನಿರ್ಗಮಿಸುವ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಗೆ ಓವಲ್ ಕಚೇರಿಯ ರೆಸೊಲ್ಯೂಟ್ ಮೇಜಿನಲ್ಲಿ ಪತ್ರ ಬರೆದಿಟ್ಟು ಹೋಗುವುದು ವಾಡಿಕೆಯಾಗಿದೆ.

ಹಾಗಿದ್ದರೂ ಜೋ ಬೈಡನ್ ಪ್ರಮಾಣ ವಚನ ಸಮಾರಂಭದಿಂದ ದೂರ ನಿಲ್ಲುವ ಮೂಲಕ ಡೊನಾಲ್ಡ್ ಟ್ರಂಪ್, ಅಮೆರಿಕದ ಹಲವು ಅಧ್ಯಕ್ಷೀಯ ಸಂಪ್ರದಾಯಗಳನ್ನು ಮುರಿದಿದ್ದರು. ಔಪಚಾರಿಕವಾಗಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಕೂಡಾ ಸಲ್ಲಿಸಿರಲಿಲ್ಲ.

ADVERTISEMENT

ಈ ಎಲ್ಲದರ ನಡುವೆಯೂ ಅಧ್ಯಕ್ಷಗಾದಿಯ ಕೊನೆಯ ದಿನದಂದು ನೂತನವಾಗಿ ಅಧಿಕಾರ ವಹಿಸಿರುವ ಜೋ ಬೈಡನ್‌ಗೆ ಟಿಪ್ಪಣಿ ಬರೆದಿಟ್ಟು ಹೋಗುವ ಮೂಲಕ ಗಮನ ಸೆಳೆದಿದ್ದಾರೆ.

ಡೊನಾಲ್ಡ್ ಟ್ರಂಪ್ ಬಹಳ ಉದಾತ್ತ ಪತ್ರವನ್ನು ಬರೆದಿಟ್ಟು ಹೋಗಿದ್ದಾರೆ. ಖಾಸಗಿಯಾದ ಕಾರಣ ಅದರಲ್ಲಿರುವ ವಿವರಗಳ ಬಗ್ಗೆ ಮಾಹಿತಿ ನೀಡಲು ಬಯಸುವುದಿಲ್ಲ. ಅವರೊಂದಿಗೆ ಮಾತನಾಡುವ ವರೆಗೂ ಈ ಬಗ್ಗೆ ನಾನು ಚರ್ಚಿಸುವುದಿಲ್ಲ ಎಂದು ಬುಧವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಜೋ ಬೈಡನ್ ಸುದ್ದಿಗಾರರಿಗೆ ತಿಳಿಸಿದರು.

ಅದೇ ಹೊತ್ತಿಗೆ ಹಲವು ಭಿನ್ನಾಭಿಪ್ರಾಯಗಳ ನಡುವೆಯೂ ಡೊನಾಲ್ಡ್ ಟ್ರಂಪ್ ಜೊತೆಗೆ ಮಾತನಾಡಲು ಉತ್ಸುಕರಾಗಿರುವುದಾಗಿ ಜೋ ಬೈಡನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.