ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉನ್ನತ ಸಲಹೆಗಾರರಾದ ಹೋಪ್ ಹಿಕ್ಸ್ ಅವರಿಗೆ ಕೋವಿಡ್-19 ದೃಢಪಟ್ಟಿದ್ದು, ರೋಗಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಅವರ ಆಪ್ತ ಮೂಲವು ಗುರುವಾರ ತಿಳಿಸಿದೆ.
ಹಿಕ್ಸ್ ಅವರು ಅಧ್ಯಕ್ಷರೊಂದಿಗೆ ಏರ್ ಫೋರ್ಸ್ ಒನ್‌ನಲ್ಲಿ ನಿಯಮಿತವಾಗಿ ಪ್ರಯಾಣಿಸುತ್ತಿರುತ್ತಾರೆ ಮತ್ತು ಈ ವಾರದ ಆರಂಭದಲ್ಲಿ ಇತರ ಹಿರಿಯ ಸಹಾಯಕರೊಂದಿಗೆ ಅಧ್ಯಕ್ಷರ ಚುನಾವಣಾ ಚರ್ಚೆಗೆ ಕ್ಲೀವ್‌ಲ್ಯಾಂಡ್‌ಗೆ ತೆರಳಿದ್ದರು.
ಟ್ರಂಪ್ ಅವರು 'ತಮ್ಮ ಹಾಗೂ ಅಮೆರಿಕದ ಜನರಿಗೆ ಬೆಂಬಲವಾಗಿ ಕೆಲಸ ಮಾಡುವ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ'. ಕೋವಿಡ್-19 ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಅಗತ್ಯವಿರುವ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಕ್ಸ್ ಅವರಿಗೆ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್-19 ದೃಢಪಟ್ಟಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಮೊದಲು ವರದಿ ಮಾಡಿದೆ.ತಮ್ಮ ಆಪ್ತ ಸಲಹೆಗಾರರೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರಿಂದಾಗಿ ತಾನು ಕ್ವಾರಂಟೈನ್ ಆಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
'ಸಣ್ಣ ವಿರಾಮವನ್ನು ಕೂಡ ತೆಗೆದುಕೊಳ್ಳದೆ ತುಂಬಾ ಶ್ರಮಿಸುತ್ತಿರುವ ಹೋಪ್ ಹಿಕ್ಸ್ ಅವರಿಗೆ ಕೋವಿಡ್-19 ದೃಢಪಟ್ಟಿದೆ. ಇದು ಭಯಾನಕ. ನನ್ನ ಪತ್ನಿ ಮತ್ತು ನಾನು ನಮ್ಮ ಕೋವಿಡ್ ಪರೀಕ್ಷೆ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ. ಈ ಮಧ್ಯೆ, ನಾವು ನಮ್ಮ ಕ್ವಾರಂಟೈನ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ!' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಸಾರ್ವಜನಿಕ ಆರೋಗ್ಯ ತಜ್ಞರು 14 ದಿನಗಳವರೆಗೆ ಕ್ವಾರಂಟೈನ್ ಆಗಲು ಶಿಫಾರಸು ಮಾಡಿದ್ದರೂ, ಅವರು ಎಷ್ಟು ದಿನ ಪ್ರತ್ಯೇಕವಾಗಿರಲು ಯೋಜಿಸುತ್ತಿದ್ದಾರೆಂದು ತಿಳಿಸಿಲ್ಲ.
ಖಾಸಗಿ ವಲಯದಲ್ಲಿ ಕೆಲಸ ಮಾಡಿದ ನಂತರ ಹಿಕ್ಸ್ ಈ ವರ್ಷದ ಆರಂಭದಲ್ಲಿ ಶ್ವೇತಭವನಕ್ಕೆ ಬಂದರು. ಅವರು ಈ ಹಿಂದೆ ಶ್ವೇತಭವನದ ಸಂವಹನ ನಿರ್ದೇಶಕರಾಗಿ ಮತ್ತು ಟ್ರಂಪ್ ಅವರ 2016ರ ಅಧ್ಯಕ್ಷೀಯ ಪ್ರಚಾರದ ವಕ್ತಾರರಾಗಿ ಸೇವೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.