ADVERTISEMENT

ಭಯೋತ್ಪಾದನೆ ವಿಭ‌‌ಜಿಸುವ ಪ್ರಯತ್ನ ಬೇಡ: ಭಾರತ

ಎಲ್ಲ ರಾಷ್ಟ್ರಗಳು ಒಗ್ಗೂಡಿ ಹೋರಾಟ ನಡೆಸುವ ಪ್ರಯತ್ನ ಕೈಗೊಳ್ಳಲು ಸಲಹೆ

ಪಿಟಿಐ
Published 7 ಜುಲೈ 2021, 6:19 IST
Last Updated 7 ಜುಲೈ 2021, 6:19 IST
ಟಿ.ಎಸ್‌. ತ್ರಿಮೂರ್ತಿ
ಟಿ.ಎಸ್‌. ತ್ರಿಮೂರ್ತಿ   

ವಿಶ್ವಸಂಸ್ಥೆ: ‘ಭಯೋತ್ಪಾದನೆಗೆ ವಿಭಿನ್ನ ರೀತಿ ಪರಿಭಾಷೆಗಳನ್ನು ನೀಡುವ ಮೂಲಕ ವಿಭಜಿಸುವ ಪ್ರಯತ್ನವನ್ನು ಮತ್ತೊಮ್ಮೆ ಮಾಡಲಾಗುತ್ತಿದೆ. ಅಂತಹ ಪ್ರಯತ್ನಗಳನ್ನು ಕೈಬಿಟ್ಟು ಒಗ್ಗಟ್ಟಿನಿಂದ ಭಯೋತ್ಪಾದನೆ ನಿಗ್ರಹಿಸಬೇಕು’ ಎಂದು ಭಾರತ ಹೇಳಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶದಲ್ಲಿ ‘ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಕಾರ್ಯತಂತ್ರ’ (ಜಿಸಿಟಿಎಸ್‌) ಕುರಿತಾದ ನಿರ್ಣಯಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌. ತ್ರಿಮೂರ್ತಿ ಅವರು, ಭಯೋತ್ಪಾದನೆಯ ಕ್ರೂರ ಸ್ವರೂಪದ ಬಗ್ಗೆ ವಿವರಿಸಿದರು.

‘ನಿಮ್ಮ ಭಯೋತ್ಪಾದನೆ ಮತ್ತು ನಮ್ಮ ಭಯೋತ್ಪಾದನೆ ಎನ್ನುವ ಕಾಲಕ್ಕೆ ಮತ್ತೆ ಜಗತ್ತು ಹಿಂತಿರುಗಬಾರದು. 2001ರ ಸೆಪ್ಟೆಂಬರ್‌ 11ರಂದು ಉಗ್ರರು ದಾಳಿ ನಡೆಸಿದ್ದನ್ನು ನೆನಪಿಸಿಕೊಳ್ಳಬೇಕು. 20 ವರ್ಷಗಳ ಬಳಿಕವೂ ಭಯೋತ್ಪಾದನೆಗೆ ರಾಷ್ಟ್ರೀಯವಾದಿ ಹಿಂಸಾಚಾರ ಮತ್ತು ಬಲ ಪಂಥೀಯ ಉಗ್ರವಾದ ಇತ್ಯಾದಿ ಪರಿಭಾಷೆಗಳನ್ನು ಬಳಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಭಯೋತ್ಪಾದನೆಯ ಬೆದರಿಕೆಯು ಗಂಭೀರ ಮತ್ತು ಸಾರ್ವತ್ರಿಕವಾಗಿದೆ. ವಿಶ್ವಸಂಸ್ಥೆಯ ಎಲ್ಲ ಸದಸ್ಯರು ಒಗ್ಗೂಡಿ ಪ್ರಯತ್ನಿಸುವ ಮೂಲಕವೇ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬಹುದು. ಈ ಹೋರಾಟದಲ್ಲಿ ಯಾವ ರಾಷ್ಟ್ರವನ್ನು ಹೊರಗಿಡಬಾರದು’ ಎಂದು ಪ್ರತಿಪಾದಿಸಿದರು.

‘ಜಗತ್ತಿನ ಒಂದು ಭಾಗದಲ್ಲಿನ ಭಯೋತ್ಪಾದನೆಯು ಇನ್ನೊಂದು ಭಾಗದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು 2001 ಸೆಪ್ಟೆಂಬರ್‌ 11ರ ದಾಳಿಯ ಬಳಿಕವೇ ಗೊತ್ತಾಯಿತು. ಈ ಘಟನೆಯ ಬಳಿಕವೇ ಭಯೋತ್ಪಾದನೆ ವಿರುದ್ಧ ಒಗ್ಗೂಡಿ ಹೋರಾಟ ನಡೆಸುವ ಪ್ರಯತ್ನ ಆರಂಭವಾಯಿತು. ಇದಕ್ಕೂ ಮೊದಲು ಜಗತ್ತು ಭಯೋತ್ಪಾದನೆ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿತ್ತು’ ಎಂದು ವಿವರಿಸಿದರು.

‘ಸದಸ್ಯ ರಾಷ್ಟ್ರಗಳು ಇತಿಹಾಸವನ್ನು ಮರೆಯಬಾರದು. ಮತ್ತೊಮ್ಮೆ ಭಯೋತ್ಪಾದನೆಯನ್ನು ವಿಭಜಿಸುವ ಪ್ರಯತ್ನಕ್ಕೆ ಕೈಹಾಕಬಾರದು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.