ADVERTISEMENT

ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಹಡಗು; ಜಾಗತಿಕ ಶಿಪ್ಪಿಂಗ್‌ ವ್ಯವಸ್ಥೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 10:31 IST
Last Updated 25 ಮಾರ್ಚ್ 2021, 10:31 IST
ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಸರಕು ಸಾಗಾಣೆಯ ಹಡಗು (ಚಿತ್ರ ಕೃಪೆ: ರಾಯಿಟರ್ಸ್)
ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಸರಕು ಸಾಗಾಣೆಯ ಹಡಗು (ಚಿತ್ರ ಕೃಪೆ: ರಾಯಿಟರ್ಸ್)   

ಕೈರೊ: ವಿಶ್ವದ ಅತ್ಯಂತ ನಿಬಿಡ ಕಡಲ ವ್ಯಾಪಾರ ಮಾರ್ಗವಾದ ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ದೈತ್ಯ ಕಂಟೇನರ್ ಹಡಗು ಸಿಲುಕಿಕೊಂಡಿರುವ ಪರಿಣಾಮ ಸಂಚಾರ ಬಿಕ್ಕಟ್ಟು ಎದುರಾಗಿದ್ದು, ಜಾಗತಿಕ ಶಿಪ್ಪಿಂಗ್ ವ್ಯವಸ್ಥೆಗೆ ಅಡ್ಡಿಯುಂಟಾಗಿದೆ.

ಸುಯೆಜ್ ಕಾಲುವೆಯಲ್ಲಿ ಬೃಹತ್ ಸರಕು ಸಾಗಾಣೆ ಹಡಗು ಸಿಲುಕಿಕೊಂಡಿದ್ದು, ಹಡಗನ್ನು ತೆರವುಗೊಳಿಸಲು ಈಜಿಪ್ಟ್‌ನ ಟಗ್ ಬೋಟ್‌ಗಳು ಹರಸಾಹಸಪಡುತ್ತಿವೆ.

ತೈವಾನ್ ನಿರ್ವಹಣೆಯಲ್ಲಿರುವ ಪನಾಮಾ ಮೂಲದ 400 ಮೀಟರ್ ಉದ್ದದ 'ಎಂವಿ ಎವರ್ ಗ್ರೀನ್' ಹಡಗನ್ನು ತಿರುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸುಯೆಜ್ ಕಾಲುವೆ ಪ್ರಾಧಿಕಾರ (ಎಸ್‌ಸಿಎ) ಗುರುವಾರ ತಿಳಿಸಿದೆ.

ADVERTISEMENT

ಪ್ಲಾನೆಟ್ ಲ್ಯಾಬ್ಸ್ ಐಎನ್‌ಸಿ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳಲ್ಲಿ 59 ಮೀಟರ್ ಅಗಲದ ಕಂಟೇನರ್ ಹಡಗು, ಮಾನವ ನಿರ್ಮಿತ ಸುಯೆಜ್ ಕಾಲುವೆಯ ಉದ್ದಕ್ಕೂ ವಾಲಿರುವುದು ಕಂಡುಬಂದಿದೆ.

ನಾವು ಈ ಮೊದಲು ಇಂತಹ ಪರಿಸ್ಥಿತಿಯನ್ನು ಎಂದೂಎದುರಿಸಿಲ್ಲ ಎಂದು ಮಧ್ಯಪ್ರಾಚ್ಯ ತೈಲ ಮತ್ತು ಹಡಗು ಸಂಶೋಧಕ ರಂಜೀತ್ ರಾಜಾ ತಿಳಿಸಿದ್ದಾರೆ.

ಪ್ರಸ್ತುತ ಎದುರಾಗಿರುವಸಂಚಾರ ಬಿಕ್ಕಟ್ಟು ಪರಿಹರಿಸಲು ಹಲವಾರು ದಿನಗಳು ಅಥವಾ ವಾರಗಳೇ ಬೇಕಾಗಬಹುದು. ಇದು ಇತರೆ ಸರಕು ಸಾಗಾಣೆ ಹಡಗುಗಳ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

ಸುಯೆಜ್ ಕಾಲುವೆಯಲ್ಲಿ ಸರಕು ಹಡಗುಗಳ ಸಂಚಾರ ದಟ್ಟಣೆ ಉಂಟಾಗಿರುವ ಪರಿಣಾಮ ಈಗಾಗಲೇ ವಿಶ್ವ ತೈಲ ಮಾರುಕಟ್ಟೆಯಲ್ಲಿ ಬಿಸಿ ಮುಟ್ಟಿದೆ. ಕಚ್ಚಾ ತೈಲ ಬೆಲೆ ಬುಧವಾರ ಆರು ಪ್ರತಿಶತದಷ್ಟು ಏರಿಕೆಯಾಗಿದ್ದು, ತೈಲ ವಿತರಣೆಗಳ ಮೇಲೂ ಅಡ್ಡ ಪರಿಣಾಮ ಬೀರಿದೆ.

ಬೃಹತ್ ಹಡಗನ್ನು ಸರಿಸಲು ಟಬ್ ಬೋಟ್‌ಗಳಿಂದ ಸಾಧ್ಯವಾಗದಿದ್ದರೆ ಹಡಗಿನಲ್ಲಿರುವ ಸರಕುಗಳನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಹಲವಾರು ದಿನಗಳು ಅಥವಾ ವಾರಗಳೇ ಬೇಕಾದೀತು ಎಂದು ಮಾಹಿತಿ ನೀಡಿದ್ದಾರೆ.

ಸಿಂಗಾಪುರ ಮೂಲದ ಬರ್ನ್‌ಹಾರ್ಡ್ ಶುಲ್ಟೆ ಶಿಪ್‌ಮ್ಯಾನೇಜ್‌ಮೆಂಟ್ ನೀಡಿರುವ ಮಾಹಿತಿ ಪ್ರಕಾರ, ಹಡಗಿನಲ್ಲಿದ್ದ ಎಲ್ಲ 25 ಮಂದಿ ಸಿಬ್ಬಂದಿಗಳು ಸುರಕ್ಷಿತವಾಗಿದ್ದು, ಸರಕು ಹಡಗಿಗೆ ಯಾವುದೇ ಹಾನಿ ಸಂಭವಿಸಿಲ್ಲ.

ಏಷ್ಯಾ ಹಾಗೂ ಯುರೋಪ್ ನಡುವಣ ವ್ಯಾಪಾರಕ್ಕೆ ಸುಯೆಜ್ ಕಾಲುವೆ ನಿರ್ಣಾಯಕವೆನಿಸಿದ್ದು, ಸರಕು ಸಾಗಾಣೆಯ ಹಡಗುಗಳು ಈ ಜಲಮಾರ್ಗದ ಮೂಲಕ ಹಾದು ಹೋಗುತ್ತದೆ.

ಎಸ್‌ಸಿಎ ಪ್ರಕಾರ ಕಳೆದ ವರ್ಷ ಸುಮಾರು 19,000 ಹಡಗುಗಳು ಸುಯೆಜ್ ಕಾಲುವೆಯ ಮೂಲಕ ಹಾದು ಹೋಗಿದ್ದು,ಒಂದು ಶತಕೋಟಿ ಟನ್‌ಗಿಂತಲೂ ಹೆಚ್ಚು ಸರಕುಗಳನ್ನು ಸಾಗಿಸಿದ್ದವು.

ಸುಯೆಜ್ ಕಾಲುವೆಯಿಂದ ಈಜಿಪ್ಟ್, 2020ರಲ್ಲಿ 5.61 ಬಿಲಿಯನ್ ಅಮೆರಿಕನ್ ಡಾಲರ್ ಆದಾಯವನ್ನು ಸಂಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.