ADVERTISEMENT

ಪುಟಿನ್ ಜೊತೆ ಜಗಳ: ಹೆಸರು ಬದಲಾಯಿಸಿಕೊಂಡ ಎಲಾನ್ ಮಸ್ಕ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2022, 14:04 IST
Last Updated 16 ಮಾರ್ಚ್ 2022, 14:04 IST
ಪುಟಿನ್ ಮತ್ತು ಎಲಾನ್ ಮಸ್ಕ್
ಪುಟಿನ್ ಮತ್ತು ಎಲಾನ್ ಮಸ್ಕ್   

ಬೆಂಗಳೂರು: ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರೆ!

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಟ್ವಿಟರ್‌ನಲ್ಲಿ ಸದಾ ಕ್ರಿಯಾಶೀಲರಾಗಿರುವ ಎಲಾನ್ ಮಸ್ಕ್ ಆಗಾಗ ಎಡವಟ್ಟುಗಳನ್ನೂ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಉಕ್ರೇನ್–ರಷ್ಯಾ ಯುದ್ಧದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಸವಾಲು ಹಾಕಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

ಸವಾಲು ಎದುರಿಸಿರುವ ಎಲಾನ್ ಮಸ್ಕ್ ತಮ್ಮ ಹೆಸರನ್ನು ಎಲೋನಾ ಮಸ್ಕ್ ಎಂದು ಬದಲಾಯಿಸಿಕೊಂಡಿದ್ದಾರೆ.

ADVERTISEMENT

ಇದಕ್ಕೆ ಕಾರಣ ಏನೆಂದರೆ, ಕಳೆದ ಮಾ.14 ರಂದು ಮಸ್ಕ್ ಅವರು ಚೆಚೆನ್ಯಾ ಅಧ್ಯಕ್ಷರನ್ನುದ್ದೇಶಿಸಿ, ಪುಟಿನ್‌ಗೆ ಅವರ ಕರಡಿಯನ್ನು ನನ್ನ ಜೊತೆ ಯುದ್ಧಕ್ಕೆ ಕರೆ ತಾ ಎಂದು ಪೋಟೊ ಹಾಕಿ ಕಾಲೆಳೆದಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಚೆಚೆನ್ಯಾ ಅಧ್ಯಕ್ಷ ರಂಜನ್ ಕದಿರೋವ್ ಅವರು, ಮಸ್ಕ್ ನೀವು ನಿಮ್ಮನ್ನು ಪುಟಿನ್‌ರೊಂದಿಗೆ ಹೋಲಿಸಿಕೊಳ್ಳಬೇಡಿ. ಮೊದಲು ಗನ್ ಹಿಡಿಯುವುದನ್ನು ಕಲಿಯಿರಿ. ಬೇಕಾದರೆ ನಮ್ಮಲ್ಲಿ ತರಬೇತಿಗೆ ಬನ್ನಿ. ಸೋಶಿಯಲ್ ಮೀಡಿಯಾಗಳನ್ನು ನಿರ್ವಹಣೆ ಮಾಡುವುದನ್ನು ಮೊದಲು ಕಲಿಯಿರಿ ಎಂದು ಮಸ್ಕ್‌ಗೆ ಹೇಳಿದ್ದಾರೆ.

ಕದಿರೊವ್ ಹಾಗೂ ಮಸ್ಕ್ ಜಗಳ ಕಂಡ ನೆಟ್ಟಿಗರು ಮಸ್ಕ್‌ಗೆ ತಮ್ಮ ಹೆಸರನ್ನು ಕೆಲ ದಿನ ಇಲೋನಾ ಎಂದು ಬದಲಾಯಿಸಿಕೊಳ್ಳುವಂತೆ ಆಗ್ರಹಿಸಿದ್ದರು.

ಈ ವಿಚಾರದ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಂಡಿರುವ ಮಸ್ಕ್, ಕದಿರೋವ್ ಆಫರ್‌ಗಾಗಿ ಧನ್ಯವಾದಗಳು. ನಿಮ್ಮ ಅಧ್ಯಕ್ಷ ನನ್ನ ಜೊತೆ ಯುದ್ಧಕ್ಕೆ ಬರಲು ಹೆದರಿದ್ದರೇ ಹೇಳು, ನಾನು ನನ್ನ ಎಡಗೈಯನ್ನು ಬಳಸುತ್ತೇನೆ. ಆದರೆ, ನಾನು ಎಡಚರ ಕೂಡ ಅಲ್ಲ ಎಂದು ಕಾಲೆಳೆದಿದ್ದಾರೆ.

ಈ ಮೂಲಕ ಅವರು ತಮ್ಮ ಹೆಸರನ್ನು ಇಲೋನಾ ಮಸ್ಕ್ ಎಂದು ಬದಲಾಯಿಸಿಕೊಂಡಿದ್ದಾರೆ. ಮಸ್ಕ್ ಅವರು ಉಕ್ರೇನ್‌ನ್ನು ಬೆಂಬಲಿಸಿದ್ದು, ಯುದ್ಧ ಘೋಷಿಸಿರುವ ರಷ್ಯಾವನ್ನು ವಿರೋಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.