ಅಂಕಾರಾ (ಟರ್ಕಿ): ಮುಸ್ಲಿಮರ ಕುರಿತಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ನಿಲುವಿನ ವಿರುದ್ಧ ಟರ್ಕಿಯ ಅಧ್ಯಕ್ಷ ತೈಯಿಪ್ ಎರ್ಡೊಗನ್ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಜತೆಗೆ, ಫ್ರೆಂಚ್ ಸರಕುಗಳನ್ನು ಎಂದಿಗೂ ಖರೀದಿಸಬಾರದು ಎಂದು ಎರ್ಡೊಗನ್ ಅವರು ದೇಶದ ನಾಗರಿಕರಿಗೆ ಸೋಮವಾರ ಕರೆ ನೀಡಿದ್ದಾರೆ.
‘ಮಾಕ್ರನ್ ಅವರಿಗೆ ಮುಸ್ಲಿಮರೊಂದಿಗೆ ಸಮಸ್ಯೆ ಇದೆ. ಹೀಗಾಗಿ ಅವರು ಮಾನಸಿಕ ತಪಾಸಣೆ ಅಗತ್ಯವಿದೆ,’ ಎಂದು ಎರ್ಡೊಗನ್ ಶನಿವಾರವಷ್ಟೇ ಹೇಳಿದ್ದರು. ಎರಡೂ ದೇಶಗಳ ಬಾಂಧವ್ಯಕ್ಕೆ ದಕ್ಕೆ ಎದುರಾದ ಹಿನ್ನೆಲೆಯಲ್ಲಿ ಟರ್ಕಿಯ ಅಂಕಾರಾದಲ್ಲಿರುವ ತನ್ನ ರಾಯಭಾರಿಯನ್ನು ಫ್ರಾನ್ಸ್ ಹಿಂದಕ್ಕೆ ಕರೆಸಿಕೊಂಡಿದೆ.
ಎರ್ಡೊಗನ್ ಭಾನುವಾರವೂ ಫ್ರಾನ್ಸ್ ಅಧ್ಯಕ್ಷರ ವಿರುದ್ಧ ತಮ್ಮ ಟೀಕೆಗಳ ಸುರಿಮಳೆ ಸುರಿಸಿದ್ದರು. ಸೋಮವಾರವೂ ಅದು ಮುಂದುವರಿದಿದೆ.
ಟೀಕೆಗೆ ಕಾರಣವೇನು?
‘ಅಭಿವ್ಯಕ್ತಿ ಸ್ವಾತಂತ್ರದ ಕುರಿತ ತರಗತಿಯೊಂದರಲ್ಲಿ ಪ್ರವಾದಿ ಮೊಹಮ್ಮದ್‌ರ ವ್ಯಂಗ್ಯಚಿತ್ರ ಬಳಸಿದ ಕಾರಣಕ್ಕೆ ಫ್ರಾನ್ಸ್‌ನ ಇತಿಹಾಸ ಶಿಕ್ಷಕ ಸಾಮ್ಯುಯಲ್ ಪ್ಯಾಟಿ ಎಂಬುವವರನ್ನು ಐದು ದಿನಗಳ ಹಿಂದೆ ಕೊಲೆ ಮಾಡಲಾಗಿತ್ತು. ಸ್ಯಾಮ್ಯುಯಲ್ ಪ್ಯಾಟಿ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ಯಾಟಿ ಅವರಿಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಗೌರವ ಸೂಚಿಸಿದ್ದರು. ಅಲ್ಲದೆ, ಮೃತ ಶಿಕ್ಷಕ ವೀರನಾಗಿದ್ದು, ಇಸ್ಲಾಮ್‌ವಾದಿಗಳು ದೇಶದ ಬೆದರಿಕೆಯಾಗಿದ್ದಾರೆ,’ ಎಂದು ಮ್ಯಾಕ್ರನ್ ಹೇಳಿದ್ದರು.
‘ಪ್ರವಾದಿ ಮೊಹಮ್ಮದ್ದರನ್ನು ವ್ಯಂಗ್ಯ ಮಾಡಿದ ವ್ಯಕ್ತಿಯನ್ನು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಹೊಗಳಿದ್ದಾರೆ. ಅಲ್ಲದೇ ಇಸ್ಲಾಂ ಧರ್ಮದ ವಿರುದ್ಧ ಮಾತನಾಡಿದ್ದಾರೆ,’ ಎಂಬುದು ಟರ್ಕಿ ಅಧ್ಯಕ್ಷರ ಟೀಕೆಗೆ ಕಾರಣವಾಗಿದೆ.
ಪಾಕಿಸ್ತಾನದಿಂದಲೂ ಆಕ್ಷೇಪ
ಇದೇ ವಿಚಾರವಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೂ ಆಕ್ರೋಶಗೊಂಡಿದ್ದಾರೆ. ಫ್ರಾನ್ಸ್‌ನಲ್ಲಿ ಇಸ್ಲಾಂ ಅನ್ನು ಭಯೋತ್ಪಾದನೆಗೆ ಹೋಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದೇ ವಿಚಾರವಾಗಿ ಫೇಸ್‌ಬುಕ್‌ಗೆ ಪತ್ರ ಬರೆದಿರುವ ಅವರು, ಸಾಮಾಜಿಕ ತಾಣದಲ್ಲಿ ಇಸ್ಲಾಮೋಫೊಬಿಯಾ ವಿಚಾರಗಳನ್ನು ನಿಷೇಧಿಸುವಂತೆ ಮನವಿಯನ್ನೂ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.