ADVERTISEMENT

ಭಾರತಕ್ಕೆ ತೈಲ ಪೂರೈಸಲು ಪರ್ಯಾಯ ಆಯ್ಕೆಗಳ ಪರಿಶೀಲನೆ: ಅಮೆರಿಕ ಹೇಳಿಕೆ

ಇರಾನ್‌ ಮೇಲೆ ನಿರ್ಬಂಧ ವಿಚಾರ

ಪಿಟಿಐ
Published 29 ಸೆಪ್ಟೆಂಬರ್ 2018, 13:13 IST
Last Updated 29 ಸೆಪ್ಟೆಂಬರ್ 2018, 13:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಭಾರತಕ್ಕೆ ಸುಗಮವಾಗಿ ತೈಲ ಪೂರೈಕೆಯಾಗುವಂತೆ ಮಾಡಲು ಪರ್ಯಾಯ ಕ್ರಮಗಳ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅಮೆರಿಕ ತಿಳಿಸಿದೆ.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಭಾರತ ಪ್ರಮುಖವಾಗಿದೆ.ಇರಾನ್‌ ಮೇಲೆ ಮತ್ತೆ ನಿರ್ಬಂಧ ಹೇರುವುದರಿಂದ ಸಂಪೂರ್ಣವಾಗಿ ತೈಲ ಆಮದು ಸ್ಥಗಿತಗೊಳಿಸುವಂತೆ ಅಮೆರಿಕವು ಭಾರತವನ್ನು ಒತ್ತಾಯಿಸುತ್ತಿದೆ. ಹೀಗಾಗಿ, ಈ ಹೇಳಿಕೆ ಮಹತ್ವ ಪಡೆದಿದೆ.

ಅಮೆರಿಕ ಹೇರುತ್ತಿರುವ ನಿರ್ಬಂಧಗಳಿಗೆ ವಿಶ್ವಸಂಸ್ಥೆ ಅನುಮೋದನೆ ನೀಡಿಲ್ಲ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮೋದನೆ ನೀಡಿರುವ ನಿರ್ಬಂಧಗಳಿಗೆ ಮಾತ್ರ ಭಾರತ ಮಾನ್ಯತೆ ನೀಡುತ್ತಾ ಬಂದಿದೆ. ತೈಲ ಬೇಡಿಕೆಯನ್ನು ಪರಿಗಣಿಸಿದರೆ ಅಮೆರಿಕದ ಒತ್ತಾಯಕ್ಕೆ ಭಾರತ ಮಣಿಯುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

‘ನಮ್ಮ ಸ್ನೇಹಿ ರಾಷ್ಟ್ರವಾಗಿರುವ ಭಾರತದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ತೈಲ ಪೂರೈಕೆ ಬಗ್ಗೆ ಕ್ರಮಕೈಗೊಳ್ಳಬೇಕಾಗಿದೆ. ಭಾರತಕ್ಕೆ ಅಗಾಧ ಪ್ರಮಾಣದಲ್ಲಿ ತೈಲ ಅಗತ್ಯವಿದೆ ಎನ್ನುವುದು ನಮಗೆ ಗೊತ್ತು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಅಲೈಸ್‌ ವೆಲ್ಸ್‌ ತಿಳಿಸಿದ್ದಾರೆ.

ಇರಾನ್‌ ಜೊತೆಗಿನ 2015ರ ಐತಿಹಾಸಿಕ ಪರಮಾಣು ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರದ್ದುಗೊಳಿಸಿದ್ದು, ಇರಾನ್‌ ಮೇಲೆ ಹೊಸತಾಗಿ ಆರ್ಥಿಕ ನಿರ್ಬಂಧಗಳನ್ನು ಹೇರಲಾಗುತ್ತಿದೆ.

ಮೊದಲ ಹಂತದ ನಿರ್ಬಂಧನೆಗಳು ಈಗಾಗಲೇ ಜಾರಿಯಲ್ಲಿದ್ದು, ಪೂರ್ಣ ಪ್ರಮಾಣದ ನಿರ್ಬಂಧಗಳು ನವೆಂಬರ್‌ 4 ರಿಂದ ಜಾರಿಗೆ ಬರಲಿದೆ.

ಇರಾನ್ ತೈಲ ಆಮದನ್ನು ಶೂನ್ಯಕ್ಕೆ ತಗ್ಗಿಸುವ ಗುರಿ ಹೊಂದಿರುವ ಅಮೆರಿಕಭಾರತ ಸೇರಿದಂತೆ ಎಲ್ಲಾ ದೇಶಗಳ ಸಹಕಾರದ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.