ADVERTISEMENT

ಕೊರೊನಾ | ಇಂಡೊನೇಷ್ಯಾ, ಮಲೇಷ್ಯಾದಲ್ಲಿ ಫ್ಯಾಷನ್ ಮಾಸ್ಕ್‌ಗಳಿಗೆ ಬೇಡಿಕೆ

ರಾಯಿಟರ್ಸ್
Published 28 ಜೂನ್ 2020, 11:06 IST
Last Updated 28 ಜೂನ್ 2020, 11:06 IST
ಜಕಾರ್ತದ ಅಂಗಡಿಯೊಂದರಲ್ಲಿ ಫ್ಯಾಷನ್ ಮಾಸ್ಕ್ ಮಾರಾಟ –ರಾಯಿಟರ್ಸ್ ಚಿತ್ರ
ಜಕಾರ್ತದ ಅಂಗಡಿಯೊಂದರಲ್ಲಿ ಫ್ಯಾಷನ್ ಮಾಸ್ಕ್ ಮಾರಾಟ –ರಾಯಿಟರ್ಸ್ ಚಿತ್ರ   

ಜಕಾರ್ತ: ಕೊರೊನಾ ವೈರಸ್ ಸೋಂಕು ಸದ್ಯದಲ್ಲಿ ನಿರ್ಮೂಲನೆಯಾಗುವ ಸಾಧ್ಯತೆ ಕಡಿಮೆ ಇರುವ ಹೊತ್ತಿನಲ್ಲೇ ಸುರಕ್ಷತೆಗಾಗಿ ಧರಿಸುವ ಮಾಸ್ಕ್‌ಗಳನ್ನು ಇಂಡೊನೇಷ್ಯಾ ಮತ್ತು ಮಲೇಷ್ಯಾನ್ನರು ಫ್ಯಾಷನ್ ವಸ್ತುಗಳಾಗಿ ಪರಿವರ್ತನೆಗೊಳಿಸುತ್ತಿದ್ದಾರೆ.

ವಿವಿಧ ವಿನ್ಯಾಸದ ಮಾಸ್ಕ್‌ಗಾಗಿ ಇಂಡೊನೇಷ್ಯಾದಲ್ಲಿ ಬೇಡಿಕೆ ವ್ಯಕ್ತವಾಗಿದೆ. 46 ವರ್ಷ ವಯಸ್ಸಿನ ಹೆನಿ ಕುಸ್ಮಿಜತಿ ಎಂಬುವವರು ನಗುವಿನ ಮುಖದ ವಿನ್ಯಾಸ ಒಳಗೊಂಡಿರುವ, ದೊಡ್ಡದಾದ ಮತ್ತು ಕೆಂಪಗಿನ ತುಟಿಯ ಚಿತ್ರವುಳ್ಳ ಮಾಸ್ಕ್‌ ಧರಿಸಿ ಗಮನ ಸೆಳೆದಿದ್ದಾರೆ.

‘ಜನ ನಮ್ಮನ್ನು ನೋಡಿದಾಗ, ಇವರು ಯಾಕೆ ನಗುತ್ತಾರೆ ಎಂದು ಅಚ್ಚರಿಪಡುತ್ತಾರೆ’ ಎನ್ನುತ್ತಾರೆ ಕುಸ್ಮಿಜತಿ.

ADVERTISEMENT

ಜಕಾರ್ತದ ಅಂಗಡಿಯೊಂದು ಕೊರೊನಾದಿಂದ ವ್ಯಾಪಾರ ವಹಿವಾಟು ಕುಸಿದಿರುವುದರಿಂದ ಈಗ ಮಾಸ್ಕ್ ಮಾರಾಟವನ್ನೇ ಪ್ರಮುಖ ಉದ್ಯಮವನ್ನಾಗಿಸಿಕೊಂಡಿದೆ. ಇಂಡೊನೇಷ್ಯಾದಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 2,620 ಜನರು ಮೃತಪಟ್ಟಿದ್ದಾರೆ.

ಗ್ರಾಹಕರು ಆನ್‌ಲೈನ್ ಮೂಲಕ ಮಾಸ್ಕ್‌ಗೆ ಆರ್ಡರ್ ಮಾಡುತ್ತಿದ್ದು, ಅವರ ಮುಖದ ಚಿತ್ರಗಳನ್ನೂ ಅಪ್‌ಲೋಡ್ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಅವರ ಬೇಡಿಕೆಯ ವಿನ್ಯಾಸದ ಮಾಸ್ಕ್‌ ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಸಮುಮಾರು 30 ನಿಮಿಷ ಬೇಕಾಗುತ್ತದೆ. 3.50 ಡಾಲರ್‌ಗೆ ಇದನ್ನು ಮಾರಾಟ ಮಾಡುತ್ತೇವೆ ಎಂದು ಅಂಗಡಿಯ ಮಾಲೀಕ ತಿಳಿಸಿದ್ದಾರೆ.

‘ಆರಂಭದಲ್ಲಿ ನಮಗೆ ಯಶಸ್ವಿಯಾಗುವ ಬಗ್ಗೆ ಅನುಮಾನವಿತ್ತು. ಆದರೆ, ಬಳಿಕ ಬೇಡಿಕೆ ಹೆಚ್ಚಾಗಿದೆ. ಇದು ಉದ್ಯಮ ನಷ್ಟವನ್ನು ಸರಿದೂಗಿಸಲು ನಮಗೆ ನೆರವಾಗಿದೆ’ ಎನ್ನುತ್ತಾರೆ ಅವರು.

ಆಗ್ನೇಯ ಏಷ್ಯಾದ ದೇಶಗಳಲ್ಲೂ ಇಂಥದ್ದೇ ಕ್ರಮ ಅನುಸರಿಸಲಾಗುತ್ತಿದೆ.

ವಿವಿಧ ವಿನ್ಯಾಸದ ಚಿತ್ರಗಳನ್ನೊಳಗೊಂಡ ಮಾಸ್ಕ್‌ಗಳು ಮಲೇಷ್ಯಾದಲ್ಲಿ ಜನಪ್ರಿಯವಾಗಿವೆ. ಮಾಸ್ಕ್ ಧರಿಸುವುದನ್ನು ಅಲ್ಲಿ ಕಡ್ಡಾಯಗೊಳಿಸಲಾಗಿಲ್ಲವಾದರೂ ಉದ್ಯಮ ಸಂಸ್ಥೆಗಳು ಉತ್ತೇಜನ ನೀಡುತ್ತಿವೆ. ಮಲೇಷ್ಯಾದಲ್ಲಿ ಸುಮಾರು 8,600 ಜನರಿಗೆ ಕೋವಿಡ್ ತಗುಲಿದ್ದು, 121 ಸಾವು ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.