ADVERTISEMENT

ಕ್ಯಾಲಿಫೋರ್ನಿಯಾ: ವಿಶ್ವದ ಅತಿ ದೊಡ್ಡ ಬ್ಯಾಟರಿ ಘಟಕದಲ್ಲಿ ಬೆಂಕಿ

ಪಿಟಿಐ
Published 17 ಜನವರಿ 2025, 14:13 IST
Last Updated 17 ಜನವರಿ 2025, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೊಸ್‌ ಲ್ಯಾಂಡಿಂಗ್‌: ಇಲ್ಲಿರುವ ವಿಶ್ವದ ಅತಿ ದೊಡ್ಡ ಬ್ಯಾಟರಿ ಶೇಖರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗಡೆ ಸಿಲುಕಿದ್ದ ನೂರಾರು ಮಂದಿಯನ್ನು ಸುರಕ್ಷಿತವಾಗಿ ಹೊರತರಲಾಗಿದೆ‌.

‘ಗುರುವಾರ ಮಧ್ಯಾಹ್ನದ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಎತ್ತರದ ಜ್ವಾಲೆಗಳು, ಕಪ್ಪು ಹೊಗೆ ಆವರಿಸಿಕೊಂಡಿತು. ಹೀಗಾಗಿ, ಮೊಸ್‌ ಲ್ಯಾಂಡಿಂಗ್ ಹಾಗೂ ಎಲ್‌ಕ್ರಾನ್‌ ದ್ವೀಪದಲ್ಲಿ ನೆಲಸಿದ್ದ 1,500 ಮಂದಿಯನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ’ ಎಂದು ‘ದಿ ಮರ್ಕ್ಯೂರಿ ನ್ಯೂಸ್‌’ ವರದಿ ಮಾಡಿದೆ. ಗುರುವಾರ ರಾತ್ರಿಯವರೆಗೂ ಬೆಂಕಿ ನಿಯಂತ್ರಣಕ್ಕೆ ಬಂದಿರಲಿಲ್ಲ.

ದಕ್ಷಿಣ ಸ್ಯಾನ್‌ಫ್ರಾನ್ಸಿಸ್ಕೊದಿಂದ 124 ಕಿ.ಮೀ. ದೂರದಲ್ಲಿ ಮೊಸ್‌ ಲ್ಯಾಂಡಿಂಗ್‌ ಬ್ಯಾಟರಿ ಕಂಪನಿಯು ಘಟಕಗಳನ್ನು ಹೊಂದಿದೆ. ಟೆಕ್ಸಾಸ್‌ ಮೂಲದ ‘ವಿಸ್ತ್ರಾ ಎನರ್ಜಿ’ ಇದರ ಮಾಲೀಕತ್ವ ಹೊಂದಿದ್ದು, ಹತ್ತು ಸಾವಿರಕ್ಕೂ ಅಧಿಕ ಲಿಥಿಯಮ್ ಬ್ಯಾಟರಿಗಳನ್ನು ಸಂಗ್ರಹಿಸಿಡಲಾಗಿತ್ತು. ಸೌರಶಕ್ತಿಯಿಂದ ಉತ್ಪಾದಿಸಲಾಗುವ ವಿದ್ಯುತ್‌ ಅನ್ನು ಸಂಗ್ರಹಿಸಿಡುವ ವ್ಯವಸ್ಥೆ ಹೊಂದಿರುವ ಬ್ಯಾಟರಿಗಳು ಇವು. 

ADVERTISEMENT

‘ಅಗ್ನಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ. ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ತನಿಖೆ ಆರಂಭಗೊಂಡಿದೆ’ ಎಂದು ‘ವಿಸ್ತ್ರಾ ಎನರ್ಜಿ’ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಜಾಗ್ರತಾ ಕ್ರಮವಾಗಿ ನಾರ್ತ್‌ ಮೊಂಟೆರೆ ಕೌಂಟಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಲ್ಲ ಶಾಲೆ ಹಾಗೂ ಕಚೇರಿಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.