ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಸೋಮವಾರ (ಜನವರಿ 20ರಂದು) ಕ್ಯಾಪಿಟಲ್ ಕಟ್ಟಡದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಮೆರಿಕ ಅಧ್ಯಕ್ಷರ ಪದಗ್ರಹಣವು ಈ ರೀತಿ ಒಳಾಂಗಣದಲ್ಲಿ ಆಗುತ್ತಿರುವುದು 40 ವರ್ಷಗಳಲ್ಲಿ ಇದೇ ಮೊದಲು.
ತೀವ್ರ ಚಳಿಯ ಕಾರಣದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಸ್ವತಃ ಟ್ರಂಪ್ ಅವರೇ ಅದನ್ನು ಖಚಿತಪಡಿಸಿದ್ದಾರೆ.
'ಆರ್ಕ್ಟಿಕ್ ಸ್ಫೋಟದಿಂದಾಗಿ ತೀವ್ರ ಚಳಿಗಾಳಿ ಬೀಸುತ್ತಿದ್ದು, ಜನರು ಪರಿತಪಿಸುತ್ತಿದ್ದಾರೆ. ನಾಗರಿಕರು ಸಂಕಷ್ಟ ಅನುಭವಿಸುವುದನ್ನು ನೋಡಲಾರೆ. ಹಾಗಾಗಿ, ಪ್ರಮಾಣವಚನ, ಪ್ರಾರ್ಥನೆ ಮತ್ತು ಇತರ ಭಾಷಣ ಕಾರ್ಯಕ್ರಮಗಳನ್ನು ಯುಎಸ್ ಕ್ಯಾಪಿಟಲ್‌ಗೆ ಸ್ಥಳಾಂತರಿಸುವಂತೆ ಆದೇಶಿಸಿದ್ದೇನೆ' ಎಂದು ಸಾಮಾಜಿಕ ಮಾಧ್ಯಮ ವೇದಿಕೆ 'ಟ್ರುತ್'ನಲ್ಲಿ ಹೇಳಿದ್ದಾರೆ.
ವಾಷಿಂಗ್ಟನ್‌ನ ಡೌನ್‌ಟೌನ್‌ನಲ್ಲಿರುವ ಕ್ಯಾಪಟಲ್ ಒನ್ ಅರೇನಾದಲ್ಲಿರುವ ಪರದೆಯ ಮೇಲೆ ಪದಗ್ರಹಣ ಸಮಾರಂಭ ಪ್ರಸಾರವಾಗಲಿದ್ದು, 20,000 ಮಂದಿ ವೀಕ್ಷಿಸಬಹುದು ಎಂದು ಟ್ರಂಪ್ ಹೇಳಿದ್ದಾರೆ. ಇದೇ ಸ್ಥಳದಲ್ಲಿ, ಪ್ರಮಾಣವಚನದ ಮುನ್ನಾದಿನ ಬೆಂಬಲಿಗರೊಂದಿಗೆ ರ‍್ಯಾಲಿ ನಡೆಸುವುದಾಗಿ ತಿಳಿಸಿದ್ದಾರೆ.
ಜನವರಿ 20ರಂದು ಟ್ರಂಪ್ ಪ್ರಮಾಣವಚನ ನಡೆಯುವ ಸಮಯಕ್ಕೆ ವಾಷಿಂಗ್ಟನ್‌ನಲ್ಲಿ ತಾಪಮಾನವು –7 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ, ತಂಪು ಗಾಳಿ ಬೀಸುವುದರಿಂದ ವಿಪರೀತ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
1985ರಲ್ಲೂ ಇದೇ ರೀತಿ ಆಗಿತ್ತು. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ರೊನಾಲ್ಡ್ ರೇಗನ್ ಅವರು ತೀವ್ರ ಚಳಿಯಿಂದಾಗಿ ಪದಗ್ರಹಣ ಕಾರ್ಯಕ್ರಮವನ್ನು ಸ್ಥಳಾಂತರಿಸಿದ್ದರು. ಆಗ, ತಾಪಮಾನವು –23 ಡಿಗ್ರಿ ಸೆಲ್ಸಿಯಸ್‌ನಿಂದ –29ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು.
ಅಮೆರಿಕದ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಅಧ್ಯಕ್ಷರಾಗಿದ್ದ ವಿಲಿಯಮ್ ಹೆನ್ರಿ ಹ್ಯಾರಿಸ್‌ಟನ್ ಅವರು, 1841ರ ಮಾರ್ಚ್ 4ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಅಂದು, ತೀವ್ರ ಚಳಿ ಇದ್ದರೂ ಟೋಪಿ ಅಥವಾ ಕೋಟ್ ಧರಿಸದೆ ಸುದೀರ್ಘ ಭಾಷಣ ಮಾಡಿದ್ದ ಅವರು, ಒಂದು ತಿಂಗಳ ನಂತರ (1841, ಏ.4ರಂದು) ನ್ಯುಮೋನಿಯಾದಿಂದ ಮೃತಪಟ್ಟಿದ್ದರು.
ತೀವ್ರ ಚಳಿಯಲ್ಲಿ ಭಾಷಣ ಮಾಡಿದ್ದೇ ಅವರ ಅನಾರೋಗ್ಯಕ್ಕೆ ಕಾರಣ ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.