ADVERTISEMENT

ಹೊರಟ ನಿಲ್ದಾಣಕ್ಕೆ ಮತ್ತೆ ಬಂದಿಳಿದ ವಿಮಾನ: 16 ತಾಸು ಕಳೆದ ಪ್ರಯಾಣಿಕರು!

ಏಜೆನ್ಸೀಸ್
Published 23 ಫೆಬ್ರುವರಿ 2023, 7:10 IST
Last Updated 23 ಫೆಬ್ರುವರಿ 2023, 7:10 IST
   

ನ್ಯೂಜಿಲೆಂಡ್‌: ನಿಲ್ದಾಣದಿಂದ ಹೊರಟ ವಿಮಾನ ಇಳಿಯಬೇಕಿದ್ದ ಸ್ಥಳ ತಲುಪದೇ ಪ್ರಯಾಣಿಕರು ವಿಮಾನದೊಳಗೆ ಅನಿವಾರ್ಯವಾಗಿ 16 ತಾಸು ವ್ಯಯಿಸಿ ಮತ್ತೆ ಹೊರಟ ನಿಲ್ದಾಣವನ್ನೇ ಸೇರಿದ ಘಟನೆ ಇಲ್ಲಿನ ಆಕ್ಲೆಂಡ್‌ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಆಕ್ಲೆಂಡ್‌ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್‌ಗೆ ಹೊರಟ್ಟಿದ್ದ ಏರ್ ನ್ಯೂಜಿಲೆಂಡ್ ವಿಮಾನದಲ್ಲಿ ಇಂಥ ವಿಚಿತ್ರ ಘಟನೆ ನಡೆದಿದೆ. ಈ ವಿಮಾನ ತಲುಪಬೇಕಿದ್ದ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಜೆಕೆಎಫ್‌) ವಿದ್ಯುತ್‌ ಕಡಿತದ ಪರಿಣಾಮವಾಗಿ ವಿಮಾನವನ್ನು ವಾಪಾಸ್‌ ತಿರುಗಿಸಲಾಯಿತು. 8 ಗಂಟೆಗಳ ಬಳಿಕ ವಿಮಾನ ಮತ್ತೆ ಆಕ್ಲೆಂಡ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಪ್ರಯಾಣಿಕರು ಅಸಹಾಯಕ ಪರಿಸ್ಥಿತಿ ಎದುರಿಸುವಂತಾಯಿತು.

ಕಳೆದ ಗುರುವಾರ ವಿಮಾನ ನಿಲ್ದಾಣದಲ್ಲಿನ ವಿದ್ಯುತ್‌ ಸಮಸ್ಯೆಯಿಂದಾಗಿ ನ್ಯೂಯಾರ್ಕ್‌ನ ಜೆಕೆಎಫ್‌ ಟರ್ಮಿನಲ್ 1 ಅನ್ನು ಮುಚ್ಚಲಾಗಿತ್ತು. ಅಲ್ಲಿಗೆ ಬಂದಿಳಿಯಬೇಕಿದ್ದ ಕೆಲವು ವಿಮಾನಗಳನ್ನು ಬೇರೆಡೆಗೆ ತಿರುಗಿಸಬೇಕಾಯಿತು. ಕೆಲವು ಅಂತರರಾಷ್ಟ್ರೀಯ ವಿಮಾನಗಳು ನೆವಾರ್ಕ್, ವಾಷಿಂಗ್ಟನ್ ಡಲ್ಲೆಸ್, ಬೋಸ್ಟನ್ ಲೋಗನ್ ನಿಲ್ದಾಣಕ್ಕೆ ಬಂದಿಳಿದವು.

ADVERTISEMENT

ಆದರೆ ಆಕ್ಲೆಂಡ್‌ನಿಂದ ಹೊರಟಿದ್ದ ಎಎನ್‌ಜೆಡ್‌2 ವಿಮಾನ ಲ್ಯಾಂಡ್‌ ಆಗಲು ಸರಿಯಾದ ಸೂಚನೆ ಸಿಗದೇ ಯೂಟರ್ನ್‌ ತೆಗೆದುಕೊಂಡು ಬರಬೇಕಾಯಿತು. ಹೀಗಾಗಿ ಪ್ರಯಾಣಿಕರು ತಮ್ಮ ತಾಣ ತಲು‍ಪದೆ ಒಟ್ಟು 16 ಗಂಟೆ 25 ನಿಮಿಷಗಳನ್ನು ವಿಮಾನದಲ್ಲಿಯೇ ವ್ಯರ್ಥ ಮಾಡಿದಂತಾಯಿತು.

‘ತಾನು ಚೆನ್ನಾಗಿ ನಿದ್ರಿಸುತ್ತಿದ್ದೆ ಮತ್ತು ಖಂಡಿತವಾಗಿ ಜೆಕೆಎಫ್‌ನಲ್ಲಿ ಶೀಘ್ರದಲ್ಲೇ ಇಳಿಯುತ್ತೇನೆ ಎಂಬ ಭಾವನೆಯಿಂದ ಎಚ್ಚರಗೊಂಡೆ. ಸಹಪ್ರಯಾಣಿಕರಿಂದ ಆಕ್ಲೆಂಡ್‌ಗೆ ಮರಳುತ್ತಿರುವ ವಿಷಯ ತಿಳಿದು ಆಘಾತವಾಯಿತು. ಅಲ್ಲಿಯವರೆಗೆ ನಮಗೆ ಯಾವುದೇ ಸೂಚನೆಯೂ ಸಿಕ್ಕಿರಲಿಲ್ಲ’ ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.