ADVERTISEMENT

ಅಫ್ಗಾನಿಸ್ತಾನಕ್ಕೆ ‘ಉಗ್ರರ ಸರ್ಕಾರ’: ಸಚಿವ ಸಂಪುಟದಲ್ಲಿ 14 ನಿಷೇಧಿತ ಉಗ್ರರು

ಏಜೆನ್ಸೀಸ್
Published 8 ಸೆಪ್ಟೆಂಬರ್ 2021, 19:30 IST
Last Updated 8 ಸೆಪ್ಟೆಂಬರ್ 2021, 19:30 IST
ಕಾಬೂಲ್‌ ಬೀದಿಯೊಂದರಲ್ಲಿ ಅಫ್ಗಾನಿಸ್ತಾನದ ಅಧಿಕೃತ ಬಾವುಟ ಮತ್ತು ತಾಲಿಬಾನ್ ಬಾವುಟವನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿ--–ಎಎಫ್‌ಪಿ ಚಿತ್ರ
ಕಾಬೂಲ್‌ ಬೀದಿಯೊಂದರಲ್ಲಿ ಅಫ್ಗಾನಿಸ್ತಾನದ ಅಧಿಕೃತ ಬಾವುಟ ಮತ್ತು ತಾಲಿಬಾನ್ ಬಾವುಟವನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿ--–ಎಎಫ್‌ಪಿ ಚಿತ್ರ   

ಕಾಬೂಲ್/ಪೆಶಾವರ: ತಾಲಿಬಾನ್ ಘೋಷಿಸಿರುವ ನೂತನ ಹಂಗಾಮಿ ಸರ್ಕಾರದ ಸಚಿವ ಸಂಪುಟದಲ್ಲಿ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಪಟ್ಟಿಯಲ್ಲಿರುವ 14 ಉಗ್ರರು ಇದ್ದಾರೆ. ಉಗ್ರರನ್ನು ಒಳಗೊಂಡಿರುವ ಸರ್ಕಾರವನ್ನು ರಚಿಸಿರುವ ತಾಲಿಬಾನ್‌ನ ಈ ಕ್ರಮವನ್ನು ಹಲವು ದೇಶಗಳು ಖಂಡಿಸಿವೆ.

ಅಫ್ಗಾನಿಸ್ತಾನದ ತಾಲಿಬಾನ್ ನಿಯೋಜಿತ ಪ್ರಧಾನಿ ಮುಲ್ಲಾ ಮಹಮ್ಮದ್ ಹಸನ್ ಅಖುಂದ್, ಇಬ್ಬರು ಉಪ ಪ್ರಧಾನಿಗಳಾದ ಮುಲ್ಲಾ ಅಬ್ದುಲ್ ಘನಿ ಬರದರ್‌ ಮತ್ತು ಮೌಲ್ವಿ ಅಬ್ದುಲ್ ಸಲಾಂ ಹನಫಿ ಭದ್ರತಾ ಮಂಡಳಿಯ ಕಪ್ಪು ಪಟ್ಟಿಯಲ್ಲಿದ್ದಾರೆ.

ಸಿರಾಜುದ್ದೀನ್ ಹಖ್ಖಾನಿ, ಖಲೀಲ್‌ ಹಖ್ಖಾನಿ ಭದ್ರತಾ ಮಂಡಳಿಯ ಉಗ್ರರ ಕಪ್ಪು ಪಟ್ಟಿಯಲ್ಲಿದ್ದಾರೆ. ಸಿರಾಜುದ್ದೀನ್ ಹಖ್ಖಾನಿಯನ್ನು ಹಿಡಿದುಕೊಟ್ಟವರಿಗೆ ಭದ್ರತಾ ಮಂಡಳಿಯು 1 ಕೋಟಿ ಅಮೆರಿಕನ್ ಡಾಲರ್ (ಸುಮಾರು ₹73 ಕೋಟಿ) ಬಹುಮಾನ ಘೋಷಿಸಿದೆ. ಸಿರಾಜುದ್ದೀನ್ ಹಖ್ಖಾನಿಗೆ ಹಂಗಾಮಿ ಸರ್ಕಾರದಲ್ಲಿ ಗೃಹ ಖಾತೆಯ ಹೊಣೆ ನೀಡಲಾಗಿದೆ. ಆತನ ಚಿಕ್ಕಪ್ಪ ಖಲೀಲ್‌ ಹಖ್ಖಾನಿಗೆ ನಿರಾಶ್ರಿತರ ವ್ಯವಹಾರಗಳ ಖಾತೆ ನೀಡಲಾಗಿದೆ.

ADVERTISEMENT

ರಕ್ಷಣಾ ಸಚಿವ ಮುಲ್ಲಾ ಯಾಕೂಬ್, ವಿದೇಶಾಂಗ ಸಚಿವ ಮುಲ್ಲಾ ಅಮೀರ್ ಖಾನ್ ಮುತ್ತಾಕಿ ಮತ್ತು ಉಪ ವಿದೇಶಾಂಗ ಸಚಿವ ಶೇರ್ ಒಹಮ್ಮದ್ ಅಬ್ಬಾಸ್ ಸ್ಟಾನಿಕ್ಜೈ ಮೂವರನ್ನೂ ಭದ್ರತಾ ಮಂಡಳಿಯ 1988ರ ದಿಗ್ಬಂಧನ ಪಟ್ಟಿಯಲ್ಲಿ ಹೆಸರಿಸಲಾಗಿದೆ.

1998ರಲ್ಲಿ ಅಫ್ಗಾನಿಸ್ತಾನದ ಸಾಂಸ್ಕೃತಿಕ ಅಲ್ಪಸಂಖ್ಯಾತ ಬುಡಕಟ್ಟುಗಳಾದ ಶಿಯಾ ಹಜಾರಾ, ತಾಜಿಕ್ ಮತ್ತು ಉಜ್ಬೆಕ್ ಸಮುದಾಯಗಳ ಹತ್ಯಾಕಾಂಡ ನಡೆಸಿದ ಆರೋಪದಲ್ಲಿ ಬಂಧಿಸಲಾಗಿದ್ದ ತಾಲಿಬಾನ್‌ನ ಐವರು ನಾಯಕರೂ ಈಗ 33 ಸಚಿವರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಹತ್ಯಾಕಾಂಡ ನಡೆಸಿದವರನ್ನು ಅಮೆರಿಕವು ಬಂಧಿಸಿ ಗ್ವಾಂಟಾನಾಮೋ ಬೇ ಕಾರಾಗೃಹದಲ್ಲಿ ಇರಿಸಿತ್ತು. ಈ ಐವರನ್ನು ‘ತಾಲಿಬಾನ್ ಫೈವ್‌’ ಎಂದೇ ಗುರುತಿಸಲಾಗುತ್ತದೆ. ಐವರಲ್ಲಿ ನಾಲ್ವರು ಈಗ ಹಂಗಾಮಿ ಸಚಿವರ ಸ್ಥಾನ ಪಡೆದಿದ್ದಾರೆ.

ಮುಲ್ಲಾ ಮೊಹಮ್ಮದ್ ಫಾಜಿಲ್ ಉಪ ರಕ್ಷಣಾ ಸಚಿವ, ಖಾಯಿರುಲ್ಲಾ ಖಾಯಿರ್‌ಖ್ವಾ ಮಾಹಿತಿ ಮತ್ತು ಸಂಸ್ಕೃತಿ ಸಚಿವ, ಮುಲ್ಲಾ ನೂರುಲ್ಲಾ ನೂರಿ ಗಡಿ ಮತ್ತು ಬುಡಕಟ್ಟು ಸಚಿವ ಮತ್ತು ಮುಲ್ಲಾ ಅಬ್ದುಲ್ ಹಕ್ ವಾಸಿಕ್ ಗುಪ್ತಚರ ಇಲಾಖೆ ನಿರ್ದೇಶಕನ ಹುದ್ದೆ ಪಡೆದಿದ್ದಾರೆ. ತಾಲಿಬಾನ್‌ ಫೈವ್‌ನ ಕೊನೆಯ ಸದಸ್ಯ ಮೊಹಮ್ಮದ್ ನಬಿ ಒಮಾರಿಗೆ ಖೋಸ್ಟ್‌ ಪ್ರಾಂತ್ಯದ ಗವರ್ನರ್‌ ಹುದ್ದೆ ನೀಡಲಾಗಿದೆ. ಈ ಐವರನ್ನೂ ಬರಾಕ್ ಒಬಾಮ ಅವರ ಸರ್ಕಾರ ಬಿಡುಗಡೆಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.