ನ್ಯಾಂಟೆಸ್/ಪ್ಯಾರಿಸ್: ರಾಜಕಾರಣಿಗಳು ಮತ್ತು ಉದ್ದೇಶಿತ ಬಜೆಟ್ ಕಡಿತದ ವಿರುದ್ಧ ಫ್ರಾನ್ಸ್‌ನಾದ್ಯಂತ ಬುಧವಾರ ಪ್ರತಿಭಟನೆ ನಡೆದಿದ್ದು, ಸುಮಾರು 250 ಪ್ರತಿಭಟನಕಾರರನ್ನು ಬಂಧಿಸಲಾಗಿದೆ. ಹೋರಾಟಗಾರರು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ, ಕಸದ ತೊಟ್ಟಿಗಳನ್ನು ಸುಟ್ಟುಹಾಕಿದ್ದು, ರಸ್ತೆ ತಡೆಗೆ ಯತ್ನಿಸಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ಪ್ರತಿಭಟನಕಾರರು ದೇಶದಾದ್ಯಂತ ‘ಎಲ್ಲವನ್ನೂ ತಡೆಯಿರಿ’ ಎಂದು ಕರೆ ನೀಡಿದ್ದಾರೆ. ಯಾವುದೆ ತಡೆಗಳನ್ನು ಆದಷ್ಟು ಬೇಗನೆ ತೆರವು ಮಾಡಲು ದೇಶದಾದ್ಯಂತ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ವಿರುದ್ಧ ಪ್ರತಿಭಟನಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರವಷ್ಟೆ ಪ್ರಧಾನಿಯನ್ನು ಅಧಿಕಾರದಿಂದ ಕೆಳಗಿಳಿಸಲು ವಿಪಕ್ಷಗಳು ಒಗ್ಗಟ್ಟಾಗಿದ್ದವು.
‘ಮುಖ್ಯ ಸಮಸ್ಯೆ ಮ್ಯಾಕ್ರನ್ ಹೊರತು, ಮಂತ್ರಿಗಳಲ್ಲ. ಮಂತ್ರಿಗಳು ಕೂಡಾ ಸಮಸ್ಯೆಯೇ. ಆದರೆ, ಮ್ಯಾಕ್ರನ್ ಮತ್ತು ಅವರ ಕಾರ್ಯವೈಖರಿಯೇ ದೊಡ್ಡ ಸಮಸ್ಯೆ. ಅವರು ಅಧಿಕಾರದಿಂದ ತೊಲಗಬೇಕು’ ಎಂದು ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
ಇತ್ತಿಚೆಗಷ್ಟೆ ದೇಶದ ಪ್ರಧಾನಿ ಫ್ರಾಂಕೋಯಿಸ್ ಬೈರೂ ವಿಶ್ವಾಸ ಮತ ಯಾಚನೆಯಲ್ಲಿ ಸೋಲುಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ನಂತರ ಅಧ್ಯಕ್ಷ ಮ್ಯಾಕ್ರನ್ ಮಂಗಳವಾರ ಹೊಸ ಪ್ರಧಾನಿಯಾಗಿ ಆಪ್ತ ಮಿತ್ರ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ಆಯ್ಕೆ ಮಾಡಿದ್ದಾರೆ. ಇದರೊಂದಿಗೆ, ಮ್ಯಾಕ್ರನ್ ಅವರು ತಮ್ಮ ಎರಡು ವರ್ಷಗಳ ಆಡಳಿತದ ಅವಧಿಯಲ್ಲಿ ಐದನೇ ಪ್ರಧಾನಿಯನ್ನು ನೇಮಕ ಮಾಡಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.