ADVERTISEMENT

ಇರಾನ್‌ ದಾಳಿಗೆ ಜಿ–7 ರಾಷ್ಟ್ರಗಳ ಆತಂಕ: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತು ಸಭೆ

ಪಿಟಿಐ
Published 15 ಏಪ್ರಿಲ್ 2024, 23:36 IST
Last Updated 15 ಏಪ್ರಿಲ್ 2024, 23:36 IST
ಇಸ್ರೇಲ್‌ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ ಮಧ್ಯಪೂರ್ವ ವಲಯದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನ್ಯೂಯಾರ್ಕ್‌ನ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆಯಿತು –ಎಎಫ್‌ಪಿ ಚಿತ್ರ
ಇಸ್ರೇಲ್‌ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ ಮಧ್ಯಪೂರ್ವ ವಲಯದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನ್ಯೂಯಾರ್ಕ್‌ನ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆಯಿತು –ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಇಸ್ರೇಲ್‌ನ ಮೇಲೆ ಇರಾನ್‌ ನಡೆಸಿರುವ ಅಪ್ರಚೋದಿತ ಮತ್ತು ನೇರ ಸೇನಾ ದಾಳಿಗೆ ಜಿ–7 ಶೃಂಗದ ಸದಸ್ಯ ರಾಷ್ಟ್ರಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಪ್ರಾದೇಶಿಕ ಮಟ್ಟದಲ್ಲಿ ಅನಿಯಂತ್ರಿತ ಪ್ರಕ್ಷುಬ್ಧತೆಗೆ ನಾಂದಿಯಾಗಬಹುದು ಎಂದೂ ಆತಂಕ ವ್ಯಕ್ತಪಡಿಸಿವೆ.

ಇನ್ನೊಂದೆಡೆ, ಬಿಗುವಿನ ಸ್ಥಿತಿ ಶಮನಗೊಳಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಜಿಸಿ) ಶಾಶ್ವತ ಸದಸ್ಯ ರಾಷ್ಟ್ರಗಳ ತುರ್ತು ಸಭೆ ನ್ಯೂಯಾರ್ಕ್‌ನಲ್ಲಿ ನಡೆದಿದ್ದು, ವಸ್ತುಸ್ಥಿತಿ ಕುರಿತು ಚರ್ಚಿಸಲಾಯಿತು.

‘ಇರಾನ್‌ ನೇರ ದಾಳಿಯು ಪ್ರಾದೇಶಿಕ ವಲಯದಲ್ಲಿ ಅಸ್ಥಿರತೆಗೆ ಕಾರಣವಾಗಿದೆ. ಇದನ್ನು ತಡೆಯಬೇಕಿದೆ’ ಎಂದು ಜಿ–7 ರಾಷ್ಟ್ರಗಳ ನಾಯಕರು ಜಂಟಿ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಈ ನಾಯಕರ ಜೊತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ವರ್ಚುವಲ್ ವೇದಿಕೆಯಲ್ಲಿ ಸಭೆ ನಡೆಸಿ ಚರ್ಚಿಸಿದರು.

ADVERTISEMENT

ಇರಾನ್‌ನ ನೇರ ಸೇನಾ ದಾಳಿಗೆ ಪ್ರತ್ಯುತ್ತರ ನೀಡಿರುವ ಅಮೆರಿಕ ಸೇನೆ ಬೆಂಬಲಿತ ಇಸ್ರೇಲ್, 12ಕ್ಕೂ ಅಧಿಕ ಡ್ರೋನ್‌ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ‘ಯಾವುದೇ ರೀತಿಯ ಗಮನಾರ್ಹ ಹಾನಿ ಸಂಭವಿಸಿಲ್ಲ’ ಎಂದು ಇಸ್ರೇಲ್‌ನ ಆಡಳಿತವು ಈ ಸಂಬಂಧ ಪ್ರತಿಕ್ರಿಯಿಸಿದೆ.

‘ಇರಾನ್‌ ನಡೆಸಿರುವ ದಾಳಿಯನ್ನು ಜಿ–7 ರಾಷ್ಟ್ರಗಳು ಕಟುವಾಗಿ ಖಂಡಿಸಲಿವೆ. ಇಸ್ರೇಲ್‌ ಗುರಿಯಾಗಿಸಿ ನೂರಾರು ಡ್ರೋನ್‌, ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಸ್ನೇಹಿ ರಾಷ್ಟ್ರಗಳ ಸಹಕಾರದಿಂದಾಗಿ ಇಸ್ರೇಲ್‌ ದಾಳಿಯನ್ನು ವಿಫಲಗೊಳಿಸಲಾಯಿತು’ ಎಂದು ಸಭೆಯ ಬಳಿಕ ಜಿ–7 ರಾಷ್ಟ್ರಗಳ ನಾಯಕರು ಹೇಳಿದ್ದಾರೆ.

ಅಮೆರಿಕ, ಇಟಲಿ, ಜಪಾನ್, ಜರ್ಮನಿ, ಫ್ರಾನ್ಸ್, ಬ್ರಿಟನ್, ಕೆನಡಾ ಜಿ–7 ಶೃಂಗದ ಸದಸ್ಯ ರಾಷ್ಟ್ರಗಳಾಗಿವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಇಸ್ರೇಲ್‌ ಮತ್ತು ಅಲ್ಲಿನ ಪ್ರಜೆಗಳ ರಕ್ಷಣೆಗೆ ನಿಲ್ಲುವುದಾಗಿ ಬದ್ಧತೆ ಪ್ರದರ್ಶಿಸಿವೆ.

‘ಗಾಜಾದಲ್ಲಿ ಮೂಡಿರುವ ಬಿಕ್ಕಟ್ಟು ಅಂತ್ಯಗೊಳಿಸುವುದು, ಕದನ ವಿರಾಮ ಘೋಷಣೆ, ಒತ್ತೆಯಾಳುಗಳ ಬಿಡುಗಡೆಗೂ ಒತ್ತು ನೀಡಲಿದ್ದು, ಪ್ಯಾಲೆಸ್ಟೀನ್‌ಗೆ ಮಾನವೀಯ ನೆರವು ಒದಗಿಸಲಿದ್ದೇವೆ’ ಎಂದು ಜಿ–7 ರಾಷ್ಟ್ರಗಳ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ ಮೇಲಿನ ದಾಳಿ ವಿಷಯದ ಕುರಿತು ಜೋರ್ಡಾನ್‌ ರಾಜ 2ನೇ ಅಬ್ದುಲ್ಲಾ ಜೊತೆಗೂ ಚರ್ಚಿಸಿದರು. ಯಾವುದೇ ದಾಳಿಗೆ ಪ್ರತಿರೋಧ ಒಡ್ಡಲು ಸನ್ನದ್ಧವಾಗಿರುವ ನಿಟ್ಟಿನಲ್ಲಿ ಸೇನೆಯ 484, 335ನೇ ಫೈಟರ್ ಸ್ಕ್ವಾಡ್ರನ್‌ ಸದಸ್ಯರ ಜೊತೆಗೂ ಚರ್ಚಿಸಿದರು.  

ವಿವಿಧ ರಾಷ್ಟ್ರಗಳ ಜೊತೆ ಚರ್ಚೆ: 

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಜೋರ್ಡಾನ್, ಸೌದಿ ಅರೇಬಿಯಾ, ಟರ್ಕಿ, ಈಜಿಪ್ಟ್‌ನ ವಿದೇಶಾಂಗ ವ್ಯವಹಾರಗಳ ಸಚಿವರ ಜೊತೆಗೆ ಚರ್ಚಿಸಿದರು. ಅಲ್ಲದೆ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಸೌದಿ ಮತ್ತು ಇಸ್ರೇಲ್‌ನ ರಕ್ಷಣಾ ಕಾರ್ಯದರ್ಶಿ ಜೊತೆ ಚರ್ಚಿಸಿದರು.

ಮಧ್ಯಪ್ರಾಚ್ಯ ವಲಯದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸದಂತೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಚರ್ಚೆ ನಡೆಯಿತು ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ತಿಳಿಸಿದ್ದಾರೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆ
ವಾಷಿಂಗ್ಟನ್: ಇಸ್ರೇಲ್‌ನ ಮನವಿಗೆ ಸ್ಪಂದಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇರಾನ್‌ ದಾಳಿ ನಂತರ ತುರ್ತು ಸಭೆ ನಡೆಸಿತು. ಇಸ್ರೇಲ್‌ನ ಕೋರಿಕೆಯಂತೆ ಮಧ್ಯಪ್ರಾಚ್ಯದ ಸ್ಥಿತಿಯ ಬಗೆಗೆ ಚರ್ಚಿಸಲು ಸಭೆ ನಡೆಯಿತು. ಭದ್ರತಾ ಮಂಡಳಿ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರೆಸ್ ವಸ್ತುಸ್ಥಿತಿ ಕುರಿತು ಸಭೆಗೆ ಮಾಹಿತಿ ನೀಡಿದರು ಎಂದು ವರದಿ ತಿಳಿಸಿದೆ. ‘ಇರಾನ್‌ನ ದಾಳಿ ಅಂತರರಾಷ್ಟ್ರೀಯ ಕಾಯ್ದೆಯ ಉಲ್ಲಂಘನೆ. ಪ್ರಾದೇಶಿಕವಾಗಿ ಇದು ಅಸ್ಥಿರತೆ ಮೂಡಿಸಲಿದೆ. ಐಆರ್‌ಜಿಸಿ (ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕೋರ್) ಅನ್ನು ಉಗ್ರರ ಸಂಘಟನೆಯೆಂದು ಘೋಷಿಸಬೇಕು’ ಎಂದು ಇಸ್ರೇಲ್‌ ಒತ್ತಾಯಿಸಿದೆ. ಇರಾನ್‌ ಸಮರ್ಥನೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರ ಬರೆದಿರುವ ಇರಾನ್‌ ದಾಳಿ ನಡೆಸಿದ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ. ವಿಶ್ವಸಂಸ್ಥೆ ಒಪ್ಪಂದದ ವಿಧಿ 51ರ ಅನ್ವಯ ಸ್ವಯಂ ರಕ್ಷಣೆ ಕ್ರಮವಾಗಿ ಈ ದಾಳಿ ನಡೆಸಿದ್ದಾಗಿ ಪತ್ರದಲ್ಲಿ ತಿಳಿಸಿದೆ. ಏ. 13ರಂದು ಪತ್ರ ಬರೆದಿದ್ದು ಡಾಮಾಸ್ಕಸ್‌ನ ಇರಾನ್‌ನ ತಾಣದ ಮೇಲೆ ಏ. 1ರಂದು ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸಲಾಗಿದೆ ಎಂದು ಸಮರ್ಥನೆ ನೀಡಿದೆ. ಏ. 1ರಂದು ನಡೆದಿದ್ದ ದಾಳಿಯಲ್ಲಿ ಐಆರ್‌ಜಿಸಿಯ ಹಲವು ಹಿರಿಯ ಕಮಾಂಡರ್‌ಗಳು ಹತರಾಗಿದ್ದರು.
80 ಯುಎವಿ 6 ಕ್ಷಿಪಣಿ ಹೊಡೆದುರುಳಿಸಿದ ಅಮೆರಿಕ ಸೇನೆ 
ವಾಷಿಂಗ್ಟನ್: ಇಸ್ರೇಲ್‌ ಗುರಿಯಾಗಿಸಿ ಇರಾನ್‌ ಪ್ರಯೋಗಿಸಿದ್ದ 80ಕ್ಕೂ ಅಧಿಕ ಯುಎವಿ ಮತ್ತು ಕನಿಷ್ಠ 6 ಕ್ಷಿಪಣಿಗಳನ್ನು ಅಮೆರಿಕ ಸೇನೆಯು ಹೊಡೆದುರುಳಿಸಿದೆ.  ಹುತಿ ನಿಯಂತ್ರಣದಲ್ಲಿರುವ ಯೆಮನ್‌ನ ಪ್ರದೇಶದಲ್ಲಿ ಈ ಪ್ರತಿದಾಳಿ ನಡೆದಿದೆ ಎಂದು ಅಮೆರಿಕ ಸೇನೆಯ ಕೇಂದ್ರ ಕಮಾಂಡ್ ಪ್ರತಿಕ್ರಿಯಿಸಿದೆ. ಇರಾನ್‌ 300ಕ್ಕೂ ಅಧಿಕ ಡ್ರೋನ್ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು.
ಪಾಕ್‌ಗೆ ಇದೇ 22ರಂದು ಇರಾನ್‌ ಅಧ್ಯಕ್ಷರ ಭೇಟಿ
ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿನ ಬಿಗುವಿನ ಸ್ಥಿತಿ ನಡುವೆಯೂ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಇದೇ 22ರಂದು ಪಾಕಿಸ್ತಾನಕ್ಕೆ ಭೇಟಿ ನೀಡುವರು.  ಪಾಕ್‌ನ ಪ್ರಧಾನಿ ಶೆಹಬಾಜ್‌ ಷರೀಫ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಸೇನಾ ಮುಖ್ಯಸ್ಥರ ಜೊತೆಗೆ ಚರ್ಚಿಸುವರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇರಾನ್–ಪಾಕಿಸ್ತಾನ ನಡುವಣ ಬಾಂಧವ್ಯಕ್ಕೆ ವರ್ಷಾರಂಭದಲ್ಲಿ ಹಿನ್ನಡೆ ಆಗಿತ್ತು. ಇದು ಹಾಗೂ ಸದ್ಯ ಮೂಡಿರುವ ಬಿಗುವಿನ ಸ್ಥಿತಿ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಜನವರಿ ತಿಂಗಳಲ್ಲಿ ಇರಾನ್‌ ಕೈಗೊಂಡಿದ್ದ ಕ್ರಮಕ್ಕೆ ಪ್ರತೀಕಾರವಾಗಿ ಅಲ್ಲಿನ ವ್ಯಾಪ್ತಿಯ ಪ್ರದೇಶಗಳಲ್ಲಿನ ಉಗ್ರರ ನೆಲೆಯನ್ನು ಗುರಿಯಾಗಿಸಿ ಪಾಕಿಸ್ತಾನವು ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.