ADVERTISEMENT

ಜಿ7 ಶೃಂಗಸಭೆ | ಯುದ್ಧ ಸ್ಥಗಿತಗೊಳಿಸಲು ರಷ್ಯಾಕ್ಕೆ ತಾಕೀತು

ಪಿಟಿಐ
Published 20 ಮೇ 2023, 15:55 IST
Last Updated 20 ಮೇ 2023, 15:55 IST
(ಚಿತ್ರ: ಐಎಎನ್‌ಎಸ್‌)
(ಚಿತ್ರ: ಐಎಎನ್‌ಎಸ್‌)   

ಹಿರೋಷಿಮಾ : ಉಕ್ರೇನ್‌ ಮೇಲಿನ ಮಿಲಿಟರಿ ಕಾರ್ಯಾಚರಣೆಯ ಸ್ಥಗಿತಕ್ಕೆ ರಷ್ಯಾ ಮೇಲೆ ಒತ್ತಡ ಹೇರುವಂತೆ ಚೀನಾಕ್ಕೆ ಜಿ7 ರಾಷ್ಟ್ರಗಳು ಒತ್ತಾಯಿಸಿವೆ.

ಶನಿವಾರ ಒಕ್ಕೂಟದ ನಾಯಕರು ಈ ಕುರಿತು ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದು, ‘ಚೀನಾಕ್ಕೆ ಹಾನಿ ಮಾಡುವ ಅಪೇಕ್ಷೆ ನಮಗಿಲ್ಲ. ಅದರೊಟ್ಟಿಗೆ ರಚನಾತ್ಮಕ ಹಾಗೂ ಸುಸ್ಥಿರ ಬಾಂಧವ್ಯವನ್ನು ಎದುರು ನೋಡುತ್ತಿದ್ದೇವೆ. ನಮ್ಮ ಕಾಳಜಿಯನ್ನಷ್ಟೇ ಅದರ ಮುಂದಿಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

‘ಉಕ್ರೇನ್‌ ಮೇಲೆ ನಡೆಸುತ್ತಿರುವ ಯುದ್ಧವನ್ನು ಕೂಡಲೇ ರಷ್ಯಾ ಸ್ಥಗಿತಗೊಳಿಸಬೇಕು. ಯಾವುದೇ ಷರತ್ತು ಇಲ್ಲದೆ ಮಿಲಿಟರಿ ಪಡೆಗಳನ್ನು ಸಂಘರ್ಷ ಪೀಡಿತ ನೆಲದಿಂದ ಹಿಂದಕ್ಕೆ ಕರೆಯಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

‘ವಿಶ್ವಸಂಸ್ಥೆಯ ಸನ್ನದುಗಳ ಅನ್ವಯ ಉಕ್ರೇನ್‌ನಲ್ಲಿ ಶಾಂತಿ ನೆಲೆಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಚೀನಾ ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ಒಕ್ಕೂಟವು ಸಂಪೂರ್ಣ ಸಹಕಾರ ನೀಡಲಿದೆ’ ಎಂದಿದ್ದಾರೆ. 

ಜಾಗತಿಕ ಸವಾಲುಗಳ ಪರಿಹಾರಕ್ಕೆ ಒಕ್ಕೂಟ ಆದ್ಯತೆ ನೀಡಲಿದೆ. ಹವಾಮಾನ ಬದಲಾವಣೆ, ಜೀವವೈವಿಧ್ಯ, ದುರ್ಬಲ ರಾಷ್ಟ್ರಗಳಿಗೆ ಆರ್ಥಿಕ ನೆರವು, ಆರೋಗ್ಯ ಮತ್ತು ಆರ್ಥಿಕ ಸುಸ್ಥಿರತೆ ಬಗ್ಗೆ ಜಿ7 ರಾಷ್ಟ್ರಗಳೊಟ್ಟಿಗೆ ಚೀನಾದ ಸಹಕಾರವೂ ಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.

ತೈವಾನ್‌ನನ್ನು ಸಮುದ್ರ ಮತ್ತು ವಾಯು ಸಂಚಾರಗಳಿಂದ ಕಟ್ಟಿ ಹಾಕುವ ಸಂಬಂಧ ಇತ್ತೀಚೆಗೆ ಚೀನಾವು ಈ ದ್ವೀಪ ರಾಷ್ಟ್ರದ ಸುತ್ತ ಸಮರಾಭ್ಯಾಸ ನಡೆಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಜಿ7 ನಾಯಕರು, ‘ತೈವಾನ್‌ಗೆ ಸಂಬಂಧಿಸಿದಂತೆ ಚೀನಾವು ಶಾಂತಿಯುತ ನಿರ್ಣಯ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

‘ಕಾನೂನಿನ ಚೌಕಟ್ಟಿನಲ್ಲಿ ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಮಂಡಿಸಲು ಚೀನಾಕ್ಕೆ ಅವಕಾಶವಿಲ್ಲ. ಈ ಭಾಗದಲ್ಲಿ ಮಿಲಿಟರಿ ಶಕ್ತಿ ಹೆಚ್ಚಳಕ್ಕೆ ಒತ್ತು ನೀಡಿರುವ ಕ್ರಮವೂ ಸರಿಯಲ್ಲ’ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಟಿಬೆಟ್‌, ಹಾಂಗ್‌ಕಾಂಗ್‌ ಹಾಗೂ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ದಬ್ಬಾಳಿಕೆಯಿಂದ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

ಜಿ7 ನಾಯಕರ ಹೇಳಿಕೆ ಬಗ್ಗೆ ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ನ್ಯೂಸ್‌ ಏಜೆನ್ಸಿಯು ತನ್ನ ಸಂಪಾದಕೀಯದಲ್ಲಿ ಕಟುವಾಗಿ ಟೀಕಿಸಿದೆ.

‘ಜಂಟಿ ಹೇಳಿಕೆಯು ಮಾಟಗಾತಿಯರ ತಂತ್ರದಂತಿದೆ. ನಮ್ಮನ್ನು ಬೆದರಿಸುವ ತಂತ್ರದ ಭಾಗವಾಗಿದೆ. ಈ ತಂತ್ರಕ್ಕೆ ಅಮೆರಿಕ ಮೊದಲು ನೀರೆರದಿದೆ. ಆದರೆ, ಹಲವು ವರ್ಷಗಳಿಂದ ಅಮೆರಿಕವು ಯಾವ ರೀತಿ ಚೀನಾವನ್ನು ಶೋಷಣೆಗೆ ಒಳಪಡಿಸಿದೆ ಎಂಬುದನ್ನು ಮಿತ್ರ ರಾಷ್ಟ್ರಗಳು ಮೊದಲು ಅರಿಯಬೇಕು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.