ADVERTISEMENT

ಹವಾಮಾನ ಹೋರಾಟದಲ್ಲಿ ಯುವ ಚಳವಳಿಯ ಅಧ್ಯಾಯ

ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಇಂದು ಗ್ರೆಟಾ ಟನ್‌ಬರ್ಗ್‌ ಭಾಷಣ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:49 IST
Last Updated 22 ಸೆಪ್ಟೆಂಬರ್ 2019, 19:49 IST
ಗ್ರೆಟಾ
ಗ್ರೆಟಾ   

ಹವಾಮಾನ ವೈಪರೀತ್ಯ ತಡೆ ಹೋರಾಟದಲ್ಲಿ ಅತಿದೊಡ್ಡ ಹೆಸರು ಸ್ವೀಡನ್‌ನ ಗ್ರೆಟಾ ಟನ್‌ಬರ್ಗ್ ಅವರದ್ದು. ಆದರೆ ಅವರ ವಯಸ್ಸು ಮಾತ್ರ 16 ವರ್ಷ. ದೊಡ್ಡ ಯುವ ಸಮುದಾಯದ ನೇತೃತ್ವ ವಹಿಸಿ ಕಳೆದೊಂದು ವರ್ಷದಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ಗ್ರೆಟಾ ಸೋಮವಾರ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಹವಾಮಾನ ವೈಪರೀತ್ಯದಿಂದ ಜಗತ್ತು ಎದುರಿಸುತ್ತಿರುವ ತೊಂದರೆಗಳನ್ನು ಒಂದೊಂದಾಗಿ ಬಿಚ್ಚಿಡಲಿದ್ದಾರೆ. ಅವರ ಭಾಷಣಕ್ಕೆ ಜಾಗತಿಕ ನಾಯಕರು ಕಿವಿಯಾಗಲಿದ್ದಾರೆ. ಶಾಲೆಯಲ್ಲಿ ಶುರುವಾರ ಅವರ ಹೋರಾಟ ಈಗ ಜಾಗತಿಕ ಸ್ವರೂಪ ಪಡೆದ ಕಥನ ಇಲ್ಲಿದೆ...

––––––––––

ಸಮ್ಮೇಳನದ ಸಂಭಾವ್ಯ ನಿರ್ಧಾರಗಳು

ADVERTISEMENT

*ಜಗತ್ತಿನ 60 ದೇಶಗಳು ಮಾಲಿನ್ಯ ಕಡಿತಕ್ಕೆ ಕಠಿಣ ನಿರ್ಧಾರ ಪ್ರಕಟಿಸುವ ನಿರೀಕ್ಷೆ

*2050ರ ವೇಳೆಗೆ ಇಂಗಾಲ ತಟಸ್ಥ ವಾತಾವರಣ ನಿರ್ಮಿಸುವ ಗುರಿ

*2015ರ ಪ್ಯಾರಿಸ್ ಒಪ್ಪಂದವನ್ನು ಅಧಿಕೃತವಾಗಿ ಅಂಗೀಕರಿಸಲು ರಷ್ಯಾ ಒಪ್ಪಿಗೆ ನೀಡುವ ಸಾಧ್ಯತೆ

*ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಹೊಸ ಗುರಿಯನ್ನು ಭಾರತ ಪ್ರಟಿಸುವ ಸಾಧ್ಯತೆ

*ಅತಿದೊಡ್ಡ ಮಾಲಿನ್ಯ ಹೊರಸೂಸುವ ಚೀನಾದಿಂದ ಗಂಭೀರ ಕ್ರಮ ಪ್ರಕಟ ಸಾಧ್ಯತೆ

ಶುಕ್ರವಾರದ ಚಳವಳಿ

ಹವಾಮಾನ ವೀಪರೀತ್ಯ ಬಗ್ಗೆ ಸರ್ಕಾರಗಳು ಹಾಗೂ ಕಾರ್ಪೊರೇಟ್ ವಲಯವನ್ನು ಎಚ್ಚರಿಸುವ ಯುವ ಚಳವಳಿಯ ನೇತೃತ್ವ ವಹಿಸಿದ್ದ ಗ್ರೆಟಾ ಜಾಗತಿಕವಾಗಿ ಚಿರಪರಿಚಿತರಾದರು. 2018ರ ಆಗಸ್ಟ್‌ನಲ್ಲಿ ಅವರು ಆರಂಭಿಸಿದ್ದ ‘ಫ್ರೈಡೇ ಫಾರ್ ಫ್ಯೂಚರ್’ ಚಳವಳಿ ಶಾಲಾ ಇತಿಹಾಸದಲ್ಲೇ ಹೊಸತು. ವಿದ್ಯಾರ್ಥಿಗಳು ಪ್ರತಿ ಶುಕ್ರವಾರದ ಶಾಲಾ ತರಗತಿಗಳನ್ನು ತೊರೆದು, ಹವಾಮಾನ ವೈಪರೀತ್ಯದ ಬಗ್ಗೆ ತಮ್ಮ ದೇಶದ ಸರ್ಕಾರಗಳನ್ನು ಎಚ್ಚರಿಸುವ ಚಳವಳಿ ಇದು. ಕಳೆದ ನವೆಂಬರ್‌ನಲ್ಲಿ ಎರಡು ವಾರಗಳ ಕಾಲ ಸ್ವೀಡನ್‌ನ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದ ಗ್ರೆಟಾ, ಸರ್ಕಾರ ಪ್ರತಿ ವರ್ಷ ಶೇ 15ರಷ್ಟು ಮಾಲಿನ್ಯ ಹೊರಸೂಸುವಿಕೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದ್ದರು. ಅವರು ಪ್ರತಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ.

ಗ್ರೆಟಾ ಏಕೆ ಗ್ರೇಟ್?

*ವಿಶ್ವಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯ ಕುರಿತ ಗ್ರೆಟಾ ಮಾಡಿದ್ದ ಭಾಷಣ ಉಲ್ಲೇಖಾರ್ಹ

*ಬರಾಕ್ ಒಬಾಮ ಸೇರಿದಂತೆ ವಿಶ್ವ ನಾಯಕರ ಭೇಟಿ ಮಾಡಿ ಹೋರಾಟದ ಬಗ್ಗೆ ಚರ್ಚೆ

*ಕೊಂಚವೂ ಹೊಗೆ ಉಗುಳದ ದೋಣಿಯಲ್ಲಿ ಅಟ್ಲಾಟಿಂಗ್ ಸಾಗರದಲ್ಲಿ ಪ್ರಯಾಣ

*ಹವಾಮಾನ ವೈಪರೀತ್ಯ ಕುರಿತ ಬೃಹತ್ ಯುವ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರೆಟಾ

*ಮೇನಲ್ಲಿ 130 ದೇಶಗಳಲ್ಲಿ ಏಕಕಾಲಕ್ಕೆ ಚಳವಳಿ ಸಂಘಟಿಸಿದ್ದ ಯುವ ನಾಯಕಿ

ಚಳವಳಿಗೆ ಕಿಡಿ ಹೊತ್ತಿಸಿದ ಪ್ರತಿಭಟನೆ

*ಮೊದಲ ಬಾರಿಗೆ 500ಕ್ಕೂ ಹೆಚ್ಚು ಯುವ ಕಾರ್ಯಕರ್ತರಿಗೆ ಆಹ್ವಾನ ನೀಡಿದವಿಶ್ವಸಂಸ್ಥೆ

*ಪೂರ್ವಭಾವಿಯಾಗಿ ಶುಕ್ರವಾರ ಜಗತ್ತಿನೆಲ್ಲಡೆ ನಡೆದ ಪ್ರತಿಭಟನೆಯಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಭಾಗಿ

*ಈ ಹಿಂದಿನ ಯಾವುದೇ ಹವಾಮಾನ ವೈಪರೀತ್ಯ ಜಾಗೃತಿ ಪ್ರತಿಭಟನೆಗಳಲ್ಲಿ ಇಷ್ಟು ಜನ ಸೇರಿರಲಿಲ್ಲ

*ಶನಿವಾರ ಗ್ರಟಾ ನಡೆಸಿದ ಪ್ರತಿಭಟನೆ ಜಗತ್ತಿನಾದ್ಯಂತ ಯುವ ಚಳವಳಿಗೆ ಕಿಡಿ ಹೊತ್ತಿಸಲು ನೆರವು.

*ನಮ್ಮ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿದ್ದೇವೆ. ಯುವ ಜನರನ್ನು ತಡೆಯಲಾಗದು ಎಂದು ಎಚ್ಚರಿಕೆ ಕೊಟ್ಟಗ್ರೆಟಾ

ವಿಶ್ವನಾಯಕರು ಮಕ್ಕಳು!:ಕಳೆದ ಡಿಸೆಂಬರ್‌ನಲ್ಲಿ ಗ್ರೆಟಾ ನೀಡಿದ್ದ ಹೇಳಿಕೆ ಸುದ್ದಿ ಮಾಡಿತ್ತು. ವಿವಿಧ ದೇಶಗಳ 200ಕ್ಕೂ ಹೆಚ್ಚು ನಾಯಕರನ್ನು ಉದ್ದೇಶಿಸಿ ಮಾತನಾಡಿದ್ದ ಗ್ರೆಟಾ, ‘ನಾಯಕರು ಮಕ್ಕಳಂತೆ ವರ್ತಿಸುತ್ತಿದ್ದಾರೆ’ ಎಂದಿದ್ದರು.

ವಿಮಾನದ ಬದಲು ದೋಣಿ ಏರಿದಳು:ವಿಮಾನಗಳು ಅತಿಹೆಚ್ಚು ಹೊಗೆ ಉಗುಳುತ್ತವೆ ಎಂಬ ಕಾರಣಕ್ಕೆ ಹೊಗೆ ಉಗುಳದ ಸಾರಿಗೆಯನ್ನು (ಜೀರೊ ಎಮಿಷನ್) ಗ್ರೆಟಾ ಅವರು ಆಯ್ದುಕೊಂಡರು. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಯುರೋಪ್‌ನಿಂದ ಅಮೆರಿಕಕ್ಕೆ ಅಟ್ಲಾಂಟಿಕ್ ಸಮುದ್ರ ಮಾರ್ಗವಾಗಿ ಹೊಗೆ ಉಗುಳದ ದೋಣಿಯಲ್ಲಿ ಸಂಚರಿಸಿ ಮಾದರಿಯಾಗಿದ್ದಾರೆ.

ಮಾಲಿನ್ಯ ಮುಂದುವರಿದರೆ...

*2040ರ ವೇಳೆಗೆ ಕರಾವಳಿಗಳು ಮುಳುಗಲಿವೆ

*ತೀವ್ರ ಬರ ಮತ್ತು ಆಹಾರ ಆಭದ್ರತೆ ಸಾಧ್ಯತೆ

*ಮಳೆಯ ವಿನ್ಯಾಸದಲ್ಲಿ ಬದಲಾವಣೆ, ಪ್ರವಾಹ ಸೃಷ್ಟಿ

ಬದ್ಧತೆಯ ಕೊರತೆ:

ಬಹುದೊಡ್ಡ ಆರ್ಥಿಕತೆ ಹೊಂದಿರುವ ಅಮೆರಿಕ ಸೇರಿದಂತೆ ಬ್ರೆಜಿಲ್, ಜಪಾನ್ ಮೊದಲಾದ ದೇಶಗಳು ಮಾಲಿನ್ಯ ನಿಯಂತ್ರಣಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿವೆ ಎಂಬುದುವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯಿ ಗುಟೆರಸ್ ಅವರ ಆರೋಪ. 2015ರ ಪ್ಯಾರಿಸ್ ಒಪ್ಪಂದ ಅನುಷ್ಠಾನಕ್ಕೆ ಬದ್ಧತೆ ತೋರಿಸುತ್ತಿಲ್ಲ. ಇದು ಮುಂದುವರಿದರೆ ಈ ಶತಮಾನದ ಅಂತ್ಯಕ್ಕೆ ತಾಮಪಾನ 3 ಡಗ್ರಿ ಸೆಲ್ಸಿಯಸ್‌ಗೂ ಹೆಚ್ಚಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಯುವ ಸಮೂಹ ಹೋರಾಟಕ್ಕೆ ಮುಂದಾಗಿರುವುದನ್ನು ಅವರು ಶ್ಲಾಘಿಸಿದ್ದಾರೆ.

ಪರಸರಪ್ರೇಮಿ ನಾಯಕರು

ಲೆಸೀನ್ ಯೆಸ್ (ಕೆನ್ಯಾ–15 ವರ್ಷ) :ಫುಟ್‌ಬಾಲ್‌ ಆಟಗಾರರೂ ಆಗಿರುವ ಲೆಸೀನ್, ತಾವು ಹೊಡೆಯುವ ಪ್ರತಿ ಗೋಲಿನ ನೆನಪಿನಲ್ಲಿ ಒಂದು ಸಸಿ ನೆಡುಸುತ್ತಾರೆ.

ಅಲೆಕ್ಸಾಂಡ್ರಿಯಾ ವಿಲ್ಲಾಸೆನರ್ (ಅಮೆರಿಕ–14 ವರ್ಷ):ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಇವರು ಪ್ರತಿ ಶುಕ್ರವಾರ ಧರಣಿ ನಡೆಸುತ್ತಾರೆ.

ಆದಿತ್ಯ ಮುಖರ್ಜಿ (ಭಾರತ–15 ವರ್ಷ):ಪ್ಲಾಸ್ಟಿಕ್ ಸ್ಟ್ರಾ ಬಳಕೆ ನಿಲ್ಲಿಸುವಂತೆ ಜಾಗೃತಿ; ರೆಸ್ಟೋರೆಂಟ್, ಕೆಫೆಗಳಿಗೆ ತೆರಳಿ ಪರ್ಯಾಯ ವಸ್ತು ಬಳಸುವಂತೆ ಮನವೊಲಿಕೆ

ಎಲ್ಲಾ ಮತ್ತು ಚೈಟ್ಲಿನ್ ಮೆಕ್ಇವಾನ್ (ಬ್ರಿಟನ್)‌: ರೆಸ್ಟೋರೆಂಟ್‌ನಲ್ಲಿ ಮಕ್ಕಳ ಆಹಾರದ ಜತೆ ನೀಡುವ ಪ್ಲಾಸ್ಟಿಕ್ ಆಟಿಕೆ ನಿರ್ಬಂಧ ಕೋರಿ ಸಹೋದರಿಯರ ಹೋರಾಟ

ಲೇಹ್ ನಮುಗೆರ್ವಾ (ಉಗಾಂಡಾ–14 ವರ್ಷ):ಈ ವಿದ್ಯಾರ್ಥಿ ಕಾರ್ಯಕರ್ತೆ ಉಗಾಂಡದಲ್ಲಿ ಶುಕ್ರವಾರದ ಪ್ರತಿಭಟನೆ ಮುನ್ನಡೆಸುತ್ತಿದ್ದಾರೆ

ಲಿಲ್ಲಿ ಪ್ಲಾಟ್ (ನೆದರ್ಲೆಂಡ್ಸ್–11 ವರ್ಷ):ಶಾಲೆಯ ಅನುಮತಿ ಪಡೆದು ತಾಯಿಯ ಒಡಗೂಡಿ ಪ್ರತಿ ಶುಕ್ರವಾರ ಒಂದು ಗಂಟೆ ಧರಣಿ

ಹೊಲ್ಲಿ ಗಿಲ್ಲಿಬ್ರಾಂಡ್ (ಬ್ರಿಟನ್):40 ಜನರೊಂದಿಗೆ ಪ್ರತಿ ಶುಕ್ರವಾರ ಧರಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.