ADVERTISEMENT

H-1B Visasದಲ್ಲಿ ಹಗರಣ: ಚೆನ್ನೈನಿಂದ 2 ಲಕ್ಷ ವಿತರಣೆ; US ಆರ್ಥಿಕ ತಜ್ಞನ ಆರೋಪ

ಏಜೆನ್ಸೀಸ್
Published 26 ನವೆಂಬರ್ 2025, 7:47 IST
Last Updated 26 ನವೆಂಬರ್ 2025, 7:47 IST
<div class="paragraphs"><p>ಡಾ. ಡೇವ್ ಬ್ರಾಟ್</p></div>

ಡಾ. ಡೇವ್ ಬ್ರಾಟ್

   

ಎಕ್ಸ್ ಚಿತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ವೃತ್ತಿ ನಿರ್ವಹಿಸುವ ವಲಸಿಗರಿಗೆ ನೀಡಲಾಗುವ ಎಚ್‌–1ಬಿ ವೀಸಾ ಈಗ ಮತ್ತೊಮ್ಮೆ ವಿವಾದದಲ್ಲಿದೆ.

ಚೆನ್ನೈನಲ್ಲಿರುವ ಅಮೆರಿಕನ್ ಕಾನ್ಸುಲೇಟ್‌ನಿಂದ ವಿತರಣೆಯಾದ 2.2 ಲಕ್ಷ ವೀಸಾಗಳಲ್ಲಿ ಹಗರಣ ನಡೆದಿದೆ ಎಂದು ಆರ್ಥಿಕ ತಜ್ಞ ಡಾ. ಡೇವ್‌ ಬ್ರಾಟ್ ಅವರ ಆರೋಪವು ಈಗ ಮತ್ತೊಮ್ಮೆ ಎಚ್‌–1ಬಿ ವೀಸಾ ಕುರಿತು ವಿವಾದವನನ್ನು ಹುಟ್ಟುಹಾಕಿದೆ.

ಚೆನ್ನೈಗೆ ನೀಡಲಾಗಿದ್ದ ಮಿತಿಗಿಂತ 2.5 ಪಟ್ಟು ಹೆಚ್ಚು ಎಚ್‌–1ಬಿ ವೀಸಾ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂಬ ಬ್ರಾಟ್‌ ಹೇಳಿಕೆ ಈಗ ಮತ್ತೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ವೃತ್ತಿಪರರಲ್ಲಿ ಆತಂಕ ಮೂಡಿಸಿದೆ.

ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಬ್ರಾಟ್‌, ಉದ್ಯಮಗಳು ನಡೆಸಿರುವ ದೊಡ್ಡ ಹಗರಣವನ್ನು ತಾನು ಪತ್ತೆ ಮಾಡಿರುವುದಾಗಿ ಹೇಳಿದ್ದಾರೆ. 

‘ಅಮೆರಿಕ ನೀಡುವ ಎಚ್‌–1ಬಿ ವೀಸಾದ ಶೇ 71ರಷ್ಟು ಭಾರತದವರೇ ಪಡೆದಿದ್ದಾರೆ. ಚೀನಾದವರು ಪಡೆದಿದ್ದು ಶೇ 12ರಷ್ಟು ಮಾತ್ರ. ಎಚ್‌–1ಬಿಇ ವೀಸಾ ಮಿತಿ ಇರುವುದೇ 85 ಸಾವಿರ. ಆದರೆ ಚೆನ್ನೈ ಕೇಂದ್ರದಿಂದ 2.2 ಲಕ್ಷ (2.5 ಪಟ್ಟು) ವೀಸಾ ನೀಡಲು ಸಂಸತ್ತು ನಿರ್ಧರಿಸಿತ್ತು’ ಎಂದು ಆರೋಪಿಸಿರುವ ಬ್ರಾಟ್ ರಿಪಬ್ಲಿಕನ್ ಪಕ್ಷದ ಮಾಜಿ ಸಂಸದ.

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ತೆಲಂಗಾಣವನ್ನು ಒಳಗೊಂಡ ಚೆನ್ನೈ ಕಾನ್ಸುಲೇಟ್‌ ಎಚ್‌–1ಬಿ ವೀಸಾ ವಿತರಣೆಯಲ್ಲೇ ಅತ್ಯಂತ ಒತ್ತಡದ ಕೇಂದ್ರಗಳಲ್ಲಿ ಅಗ್ರ ಸ್ಥಾನದಲ್ಲಿದೆ. 

ಅಮೆರಿಕ ಮೂಲದ ನೌಕರರಿಗೆ ಎದುರಾಗಿರುವ ಅಪಾಯದ ಕುರಿತು ಆರಂಭಿಸಲಾಗಿರುವ ‘ಅಮೆರಿಕವನ್ನು ಮತ್ತೊಮ್ಮೆ ಶೇಷ್ಠ ರಾಷ್ಟ್ರವನ್ನಾಗಿಸುವ’ ಅಭಿಯಾನಕ್ಕೆ ಪೂರಕವಾಗಿ ಬ್ರಾಟ್‌ ಅವರ ಆರೋಪ ಮಹತ್ವ ಪಡೆದುಕೊಂಡಿದೆ.

‘ಎಚ್‌–1ಬಿ ವೀಸಾ ಎಂದು ನಾನು ಹೇಳುವಾಗ ನಿಮಗೆ ನಿಮ್ಮ ಸೋದರ ಸಂಬಂಧಿ, ಚಿಕ್ಕಮ್ಮ, ಚಿಕ್ಕಪ್ಪ, ಅಜ್ಜಿ, ಅಜ್ಜ ಎಲ್ಲರೂ ನೆನಪಾಗುತ್ತಾರೆ. ಅವರೆಲ್ಲರೂ ಕುಶಲಕರ್ಮಿಗಳು ಎಂದೇ ಹೇಳಲಾಗುತ್ತದೆ. ಆದರೆ ಅವರು ಯಾರೂ ತಂತ್ರಜ್ಞರಲ್ಲ. ಅವರು ನಿಮ್ಮ ಹಾಗೂ ನಿಮ್ಮ ಕುಟುಂಬದ ಕೆಲಸವನ್ನು ಕಸಿಯುತ್ತಿದ್ದಾರೆ. ನಿಮ್ಮ ಮನೆ ಹಾಗೂ ನಿಮಗೆ ದೊರಕಬೇಕಾದ ಸೌಲಭ್ಯಗಳನ್ನು ಕಸಿಯುತ್ತಿದ್ದಾರೆ’ ಎಂದು ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಎಚ್‌–1ಬಿ ವೀಸಾ ವಿತರಣೆಯಲ್ಲಿ ಭಾರತದಲ್ಲಿ ಉದ್ಯಮ ಕ್ಷೇತ್ರದಿಂದ ಈ ಹಗರಣದ ನಡೆದಿದೆ ಎಂದು ಭಾರತೀಯ ಮೂಲದ ಮವಾಶ್ ಸಿದ್ಧಿಕಿ ಅವರು ಆರೋಪಿಸಿದ ಬೆನ್ನಲ್ಲೇ ಬ್ರಾಟ್ ಅವರ ಹೇಳಿಕೆಯೂ ಹೊರಬಿದ್ದಿದೆ.

ಮವಾಶ್ ಅವರು 2005ರಿಂದ 2007ರವರೆಗೆ ಚೆನ್ನೈ ಕಾನ್ಸುಲೇಟ್‌ನಲ್ಲಿ ಕೆಲಸ ಮಾಡಿದ್ದರು. 2024ರಲ್ಲಿ ಅಮೆರಿಕದ ಅಧಿಕಾರಿಗಳು ಸಾವಿರಾರು ವಲಸೆಯೇತರ ವೀಸಾಗಳನ್ನು ನೀಡಿದ್ದಾರೆ. ಇದರಲ್ಲಿ 2.2 ಲಕ್ಷ ಎಚ್‌–1ಬಿ ವೀಸಾ ಮತ್ತು ಅವರ ಕುಟುಂಬಗಳಿಗೆ ನೀಡಲಾಗುವ ಎಚ್‌–4 ವೀಸಾಗಳು 1.4 ಲಕ್ಷ ಜನರಿಗೆ ವಿತರಿಸಲಾಗಿದೆ ಎಂದು ಹೇಳಿದ್ದರು.

ಭಾರತೀಯರಿಗೆ ವಿತರಿಸಲಾದ ಎಚ್‌–1ಬಿ ವೀಸಾದಲ್ಲಿ ವಂಚನೆ ನಡೆದಿದೆ. ನಕಲಿ ಉದ್ಯೋಗದಾತ ಪತ್ರಗಳು, ಪದವಿ ಹೊಂದಿರುವುದಾಗಿ ನಕಲಿ ಅಂಕಪಟ್ಟಿ, ಅರ್ಜಿದಾರರ ಸಂದರ್ಶನ ನಡೆಸಲಾಗಿದೆ ಎಂದು ಸುಳ್ಳು ಹೇಳಲಾಗಿದೆ ಮತ್ತು ಅವರು ಶ್ರೇಷ್ಠ ಕೌಶಲ ಹೊಂದಿದವರು ಎಂದು ತಪ್ಪು ಮಾಹಿತಿ ನೀಡಲಾಗಿದೆ ಎಂದೂ ಆರೋಪಿಸಿದ್ದರು.

ಹೈದರಾಬಾದ್‌ನಲ್ಲಿ ವಿಸಾ ಅರ್ಜಿದಾರರಿಗೆ ಬಹಿರಂಗವಾಗಿಯೇ ತರಬೇತಿ ನೀಡುವ ಕೇಂದ್ರಗಳಿವೆ. ನಕಲಿ ಉದ್ಯೋಗ ಪತ್ರ ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸೃಷ್ಟಿಸುವ ಕೇಂದ್ರಗಳಿವೆ ಎಂದು ಸಿದ್ಧಿಕಿ ಆರೋಪಿಸಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.