ADVERTISEMENT

ಲೆಬನಾನ್‌ನಲ್ಲಿ ಇಸ್ರೇಲ್‌–ಹಿಜ್ಬುಲ್ಲಾ ಕದನ ವಿರಾಮ ಉಲ್ಲಂಘನೆ: ಮುಂದುವರಿದ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2024, 2:26 IST
Last Updated 3 ಡಿಸೆಂಬರ್ 2024, 2:26 IST
   

ಜೆರುಸಲೇಂ: ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರ ನಡುವಿನ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕದನ ವಿರಾಮ ಜಾರಿಯಾದ ನಂತರ ಇದೇ ಮೊದಲ ಬಾರಿಗೆ ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ನಿಯಂತ್ರಿತ ಪ್ರದೇಶವಾದ ಮೌಂಟ್ ಡೋವ್ ಕಡೆಗೆ ಎರಡು ಸ್ಪೋಟಕಗಳನ್ನು ಉಡಾಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಲೆಬನಾನ್‌ನಲ್ಲಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಇಸ್ರೇಲ್ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಲೆಬನಾನ್‌ನಲ್ಲಿ ಕದನ ವಿರಾಮ ಒಪ್ಪಂದದ ಷರತ್ತುಗಳನ್ನು ಪೂರೈಸಲು ಇಸ್ರೇಲ್ ಬಾಧ್ಯತೆ ಹೊಂದಿದೆ. ಜತೆಗೆ, ಇಸ್ರೇಲ್ ಭದ್ರತಾ ಪಡೆ (ಐಡಿಎಫ್‌) ಅಗತ್ಯವಿರುವ ಎಲ್ಲಾ ಕಾರ್ಯಾಚರಣೆಯನ್ನು ಮುಂದುವರಿಸಲು ಸಿದ್ಧವಾಗಿದ್ದು, ಇಸ್ರೇಲ್‌ ನಾಗರಿಕರನ್ನು ರಕ್ಷಿಸಲು ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ ಎಂದು ಇಸ್ರೇಲ್ ಭದ್ರತಾ ಪಡೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದೆ.

ADVERTISEMENT

ಲೆಬನಾನ್ ಮೇಲೆ ಇಸ್ರೇಲ್‌ ಪಡೆಗಳು ನಡೆಸಿದ ದಾಳಿಯಲ್ಲಿ ಸೋಮವಾರ 10 ಜನರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರ ನಡುವೆ ನವೆಂಬರ್‌ 27ರಂದು (ಬುಧವಾರ) ನಸುಕಿನಿಂದ ಕದನ ವಿರಾಮ ಜಾರಿಗೆ ಬಂದಿತ್ತು.

ಇಸ್ರೇಲ್‌ ಮತ್ತು ಹಿಜ್ಬುಲ್ಲಾ ನಡುವಣ ಸಂಘರ್ಷವು ಕಳೆದ ವರ್ಷ ಆರಂಭವಾಗಿದ್ದು, ಲೆಬನಾನ್‌ನಲ್ಲಿ ಕನಿಷ್ಠ 4,000 ಮಂದಿ ಮೃತಪಟ್ಟಿದ್ದಾರೆ. 13,150 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.

ಗಾಜಾದಲ್ಲಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸುಮಾರು 14 ತಿಂಗಳ ಯುದ್ಧದಲ್ಲಿ 44,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 1.04 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.