ಹೋರ್ಮುಜ್ ಜಲಸಂಧಿ ಮೂಲಕ ಸಾಗುತ್ತಿರುವ ಹಡಗು
ರಾಯಿಟರ್ಸ್ ಚಿತ್ರ
ದುಬೈ : ಜಾಗತಿಕವಾಗಿ ಶೇ 20ರಷ್ಟು ತೈಲ ಸಾಗಣೆಗೆ ‘ಹೆದ್ದಾರಿ’ ಆಗಿರುವ ಹೊರ್ಮುಜ್ ಜಲಸಂಧಿ ಬಂದ್ ಮಾಡುವ ತೀರ್ಮಾನಕ್ಕೆ ಇರಾನ್‌ನ ಸಂಸತ್ತು ಅನುಮೋದನೆ ನೀಡಿದೆ.
ಬಂದ್ ಕ್ರಮ ಕುರಿತು ಇರಾನ್‌ನ ಉನ್ನತಾಧಿಕಾರವುಳ್ಳ, ರಾಷ್ಟ್ರೀಯ ಭದ್ರತಾ ಮಂಡಳಿಯು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಇರಾನ್‌ನ ಪ್ರೆಸ್ ಟಿ.ವಿ ವರದಿ ಮಾಡಿದೆ.
ಹಾರ್ಮುಜ್ ಜಲಸಂದಿಯು ತೈಲ ಸಾಗಣೆ ಹಡಗುಗಳು ಸಂಚರಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ. ಜಾಗತಿಕವಾಗಿ ಶೇ 20ರಷ್ಟು ತೈಲ ಈ ಮಾರ್ಗದ ಮೂಲಕವೇ ಸಾಗಣೆಯಾಗಲಿದೆ.
ಈ ಜಲಮಾರ್ಗ ಸುಮಾರು 33 ಕಿ.ಮೀನಷ್ಟು ಅಗಲವಾಗಿದ್ದು, ಹಡಗು ಸಂಚಾರ ಮಾರ್ಗವು ಉಭಯ ಕಡೆ ಕೇವಲ 3 ಕಿ.ಮೀ.ನಷ್ಟಿದೆ. ಈ ಜಲಮಾರ್ಗವು ಒಮನ್ ಮತ್ತು ಇರಾನ್ ನಡುವೆ ಹಾದುಹೋಗಲಿದೆ. ಮಧ್ಯಪೂರ್ವದಲ್ಲಿ ಗಲ್ಫ್ ರಾಷ್ಟ್ರಗಳು, ದಕ್ಷಿಣದಲ್ಲಿ ಅರೇಬಿಯನ್ ಸಮುದ್ರಕ್ಕೆ ಸಂಪರ್ಕ ಕಲ್ಪಿಸಲಿದೆ.
ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಇರಾನ್‌ನ ಸಂಸದ ಮತ್ತು ರೆವೂಲಷನರಿ ಗಾರ್ಡ್ಸ್ ಕಮಾಂಡರ್ ಇಸ್ಮಾಯಿಲ್ ಕೊಸಾರಿ, ‘ಏನು ಅಗತ್ಯವಿದೆಯೊ ಆ ಎಲ್ಲವನ್ನು ಮಾಡುತ್ತೇವೆ’ ಎಂದರು.
ಇರಾನ್ ಜಲಮಾರ್ಗವನ್ನು ಬಂದ್ ಮಾಡಲಿದೆಯೇ ಎಮಬ ಪ್ರಶ್ನೆಗೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, ‘ನಮ್ಮ ಮುಂದೆ ಅನೇಕ ಆಯ್ಕೆಗಳಿವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಭಾರತದ ಮೇಲೂ ಪ್ರತಿಕೂಲ ಪರಿಣಾಮ?
ನವದೆಹಲಿ: ಹೊರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದಲ್ಲಿ ಅದರ ಪರಿಣಾಮ ಭಾರತಕ್ಕೆ ತೈಲ ಸಾಗಣೆ ಪ್ರಕ್ರಿಯೆಯ ಮೇಲೂ ಆಗಲಿದೆ ಎನ್ನುತ್ತಾರೆ ಪರಿಣತರು. ತೈಲ ಸಾಗಣೆ ಹಡಗುಗಳ ಸಂಚಾರ ಬಂದ್ ಆದರಲ್ಲಿ ಅದರ ಪರಿಣಾಮ ಭಾರತ ಸೇರಿದಂತೆ ಜಾಗತಿಕವಾಗಿ ಉಂಟಾಗಲಿದೆ.
ಹೊರ್ಮುಜ್ ಜಲಸಂಧಿಯು ಗಲ್ಫ್ ಮತ್ತು ಅರೇಬಿಯನ್ ಸಮುದ್ರ ನಡುವಣ ಸಂಪರ್ಕ ಮಾರ್ಗವಾಗಿದೆ ಎಂದು ಕ್ಷೇತ್ರದ ಪರಿಣತರು ಹೇಳುತ್ತಾರೆ. ಅಮೆರಿಕ ಭಾನುವಾರ ಇರಾನ್‌ನ 3 ಪರಮಾಣು ಸಂಶೋಧನಾ ನೆಲೆಗಳ ಮೆಲೆ ಬಾಂಬ್ ದಾಳಿ ನಡೆಸಿದೆ. ಇದಕ್ಕೆ ಪ್ರತೀಕಾರವಾಗಿ ಜಲಸಂಧಿ ಬಂದ್‌ಗೆ ಇರಾನ್ ಚಿಂತನೆ ನಡೆಸಿದೆ. ವಿಶ್ವದ ವಿವಿಧ ದೇಶಗಳಿಗೆ ಸಾಗಣೆ ಆಗುವ ತೈಲದ ಶೇ 30ರಷ್ಟು ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಈ ಮಾರ್ಗದ ಮೂಲಕವೇ ಸಾಗಣೆ ಆಗಲಿದೆ. ಈಗ ಜಲಸಂಧಿ ಬಂದ್ ಆದಲ್ಲಿ ಜಾಗತಿಕವಾಗಿ ಅನಿಲ ಇಂಧನ ಪೂರೈಕೆ ತಗ್ಗಲಿದೆ. ಇದರ ನೇರ ಪರಿಣಾಮವಾಗಿ ಇಂಧನ ದರ ಗಗನಮುಖಿ ಆಗಬಹುದು ಎಂಬುದು ಈಗಿನ ಆತಂಕ.
ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಲಕ್ಷ್ಮಣ್ ಕುಮಾರ್ ಬೆಹೆರಾ ಅವರು ತೈಲ ಸಾಗಣೆ ಮಾರ್ಗ ಬಂದ್ ಆದಲ್ಲಿ ಇರಾನ್‌ನಿಂದ ಆಮದಾಗುವ ಕಚ್ಚಾ ತೈಲ ತಗ್ಗಲಿದೆ ಎಂದರು. ನೌಕಾಪಡೆಯ ಮಾಜಿ ವಕ್ತಾರ ಕ್ಯಾಫ್ಟನ್ ಡಿ.ಕೆ.ಶರ್ಮಾ (ನಿವೃತ್ತ) ಅವರು ಈಗಿನ ಬೆಳವಣಿಗೆಯನ್ನುಸೂಕ್ಷ್ಮವಾಗಿ ಗಮನಿಸುತ್ತಿದ್ದು ತೈಲ ಸಾಗಣೆಗೆ ನಿರ್ಬಂಧ ಹೇರಿದಲ್ಲಿ ಅದರ ಪರಿಣಾಮ ಜಾಗತಿಕ ತೈಲ ವಹಿವಾಟಿನ ಮೇಲಾಗಲಿದೆ ಎನ್ನುತ್ತಾರೆ. ತೈಲ ದರವೂ ಗಣನೀವಾಗಿ ಏರಿಕೆ ಆಗಬಹುದು. ಇರಾನ್ ಪ್ರತೀಕಾರದ ಕ್ರಮಗಳಿಗೆ ಮುಂದಾದಲ್ಲಿ ಕಚ್ಚಾ ತೈಲ ದರವು ಬ್ಯಾರಲ್‌ಗೆ 80 ರಿಂದ 100 ಡಾಲರ್‌ಗೆ ಏರಬಹುದು. ಹೂಡಿಕೆದಾರರ ಚಿತ್ತ ಸ್ಥಿರ ಮಾರುಕಟ್ಟೆಗಳತ್ತ ಹೊರಳುವ ಕಾರಣ ಈ ವಲಯದ ದೇಶಗಳ ಕರೆನ್ಸಿಗಳ ಮೌಲ್ಯವೂ ಏರುಪೇರಾಗಬಹುದು ಎಂದು ವಿಶ್ಲೇಷಿಸಿದರು.
ಅಮೆರಿಕ ದಾಳಿಯಿಂದ ಧೃತಿಗೆಟ್ಟ ಇರಾನ್
ದಶಕಗಳ ಯತ್ನದ ಫಲವಾಗಿ ಮೂರು ಹಂತದ ಭದ್ರತೆ ಸೇನಾ ಸಾಮರ್ಥ್ಯ ಕಟ್ಟಿಕೊಂಡಿರುವ ಇರಾನ್ ಈಗ ಅಮೆರಿಕದ ನೇರ ದಾಳಿಯಿಂದ ತುಸು ದೃತಿಗೆಟ್ಟಿದೆ. ಅಮೆರಿಕ ಪಡೆಗಳು ಸರಣಿ ದಾಳಿ ನಡೆಸುವ ಇಂಗಿತ ಇರುವಂತೆಯೇ ಅದಕ್ಕೆ ಪ್ರತೀಕಾರ ನಡೆಸುವ ಸುಳಿವನ್ನು ಇರಾನ್ ನೀಡಿದೆ. ಆದರೆ ಪ್ರತೀಕಾರ ಶೈಲಿ ಇನ್ನು ಸ್ಪಷ್ವವಾಗಿಲ್ಲ. ಸದ್ಯ ಇಸ್ರೇಲ್– ಅಮೆರಿಕ ಸೇನಾ ಸಾಮರ್ಥ್ಯದಲ್ಲಿ ಮೇಲುಗೈ ಸಾಧಿಸಿವೆ. ಆದರೆ ಇದಷ್ಟೇ ಫಲನೀಡದು ಎಂಬುದಕ್ಕೆ ಈಚಿನ ಅಮೆರಿಕ ಸೇನೆ ಮಧ್ಯಪ್ರವೇಶದ ಹಲ ನಿದರ್ಶನಗಳಿವೆ.
ಇರಾನ್ ಕೈಗೊಳ್ಳಬಹುದಾದ ಸಂಭನೀಯ ‘ಪ್ರತೀಕಾರ’ ಕ್ರಮಗಳು ಹೀಗಿವೆ.
ಹೊರ್ಮುಜ್ ಜಲಸಂಧಿ ಬಂದ್: ಈ ಮೂಲಕ ಜಾಗತಿಕವಾಗಿ ತೈಲ ಸಾಗಣೆ ತೈಲ ವಹಿವಾಟಿಗೆ ಧಕ್ಕೆ ಉಂಟು ಮಾಡುವುದು. ತ್ವರಿತಗತಿಯಲ್ಲಿ ಕ್ರಮಿಸಿ ದಾಳಿ ನಡೆಸಬಹುದಾದ ಬೋಟ್ ಮತ್ತು ಜಲಾಂತರ್ಗಾಮಿ ವಾಹಕಗಳಿವೆ. ಹೀಗಾಗಿ ಇದರ ನೇರ ಪರಿಣಾಮವೂ ಹೆಚ್ಚಿರುತ್ತದೆ.
ಕುವೈತ್ ಬಹರೇನ್ ಕತಾರ್ ಮತ್ತು ಯುಎಇಗಳಲ್ಲಿ ಇರುವ ಅಮೆರಿಕದ ಸೇನಾ ನೆಲೆ ಮತ್ತು ತುಕಡಿಗಳನ್ನುಗುರಿಯಾಗಿಸಿ ದಾಳಿ ನಡೆಸಬಹುದು. ಸಾವಿರಾರು ಕಿ.ಮೀ ದೂರ ಇರುವ ಕಾರಣ ಇಸ್ರೇಲ್ ದಾಳಿಗೆ ತಡೆಯೊಡ್ಡುವುದು ಅಸಾಧ್ಯ ಎಂಬ ಅಂದಾಜಿದೆ.
ಅಮೆರಿಕವು ಸದ್ಯ ಭಾರಿ ದರ ತೆತ್ತು ಇಂಧನ ಪಡೆಯುತ್ತಿರುವ ದೇಶಗಳಲ್ಲಿನ ತೈಲ ಮತ್ತು ಅನಿಲ ನೆಲೆಗಳ ಮೇಲೆ ದಾಳಿ ನಡೆಸುವುದು. 2019ರಲ್ಲಿ ಸೌದಿ ಅರೇಬಿಯಾದ ಎರಡು ತೈಲ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.