ADVERTISEMENT

ಇಸ್ರೇಲ್ ಏರ್‌ಪೋರ್ಟ್‌ಗೆ ಅಪ್ಪಳಿಸಿದ ಹುಥಿ ಬಂಡುಕೋರರು ಹಾರಿಸಿದ ಡ್ರೋನ್

ಪಿಟಿಐ
Published 8 ಸೆಪ್ಟೆಂಬರ್ 2025, 2:29 IST
Last Updated 8 ಸೆಪ್ಟೆಂಬರ್ 2025, 2:29 IST
   

ಟೆಲ್ ಅವಿವ್: ಯೆಮೆನ್‌ನ ಹುಥಿ ಬಂಡುಕೋರರು ಹಾರಿಸಿದ ಡ್ರೋನ್ ಭಾನುವಾರ ಇಸ್ರೇಲ್‌ನ ಬಹುಪದರದ ವಾಯು ರಕ್ಷಣೆಯನ್ನು ಭೇದಿಸಿ ದೇಶದ ದಕ್ಷಿಣ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಸ್ಫೋಟದಿಂದ ವಿಮಾನನಿಲ್ದಾಣದ ಗಾಜಿನ ಕಿಟಕಿಗಳು ಒಡೆದು, ಒಬ್ಬ ವ್ಯಕ್ತಿ ಗಾಯಗೊಂಡರು. ಕೂಡಲೇ ವಾಣಿಜ್ಯ ವಿಮಾನಗಳ ಹಾರಾಟವನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.

ದಾಳಿಯಿಂದ ರಾಮನ್ ವಿಮಾನ ನಿಲ್ದಾಣಕ್ಕೆ ಹಾನಿಯಾಗಿದ್ದು, ಕೆಲ ಗಂಟೆಗಳಲ್ಲಿ ವಿಮಾನಗಳ ಹಾರಾಟ ಪುನರಾರಂಭಗೊಂಡವು. ಹುಥಿ ಬಂಡುಕೋರರು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.

ಇತ್ತೀಚೆಗೆ ಯೆಮೆನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಯೆಮೆನ್ ಪ್ರಧಾನಿ ಮತ್ತು ಇತರರನ್ನು ಕೊಂದಿತ್ತು. ಇದರ ಬೆನ್ನಲ್ಲೇ ಹುಥಿ ಬಂಡುಕೋರರು ಪ್ರತೀಕಾರದ ದಾಳಿ ನಡೆಸಿದ್ದಾರೆ.

ADVERTISEMENT

ಈ ಮಧ್ಯೆ, ಇಸ್ರೇಲ್ ತನ್ನ ಕಸ್ಟಡಿಯಲ್ಲಿರುವ ಪ್ಯಾಲೆಸ್ಟೀನಿಯನ್ ಜನರಿಗೆ ಮೂಲಭೂತ ಸೌಕರ್ಯ ಖಚಿತಪಡಿಸಿಕೊಳ್ಳಲು ಸಾಕಷ್ಟು ಆಹಾರವನ್ನು ಒದಗಿಸುತ್ತಿಲ್ಲ ಎಂದು ಇಸ್ರೇಲ್ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು ನೀಡಿದೆ. ಬಂಧನ ಕೇಂದ್ರಗಳಲ್ಲಿರುವ ಸಾವಿರಾರು ಪ್ಯಾಲೆಸ್ಟೀನಿಯನ್ನರಿಗೆ ಕಾನೂನಿಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಖಾತರಿಪಡಿಸುವಂತೆ ಅದು ಸರ್ಕಾರಕ್ಕೆ ಆದೇಶಿಸಿದೆ.

2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರು ನಡೆಸಿದ ಮಾರಕ ದಾಳಿಯ ನಂತರ, ಗಾಜಾ ಮತ್ತು ಪ್ಯಾಲೆಸ್ಟೀನ್ ಪಶ್ಚಿಮ ದಂಡೆಯಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಹಲವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.