ADVERTISEMENT

ಪಾಕಿಸ್ತಾನದಲ್ಲಿ 100 ವರ್ಷಗಳಷ್ಟು ಹಳೆಯ ದೇವಾಲಯದ ಮೇಲೆ ಅಪರಿಚಿತರಿಂದ ದಾಳಿ

ಪಿಟಿಐ
Published 29 ಮಾರ್ಚ್ 2021, 9:06 IST
Last Updated 29 ಮಾರ್ಚ್ 2021, 9:06 IST
ಸಾಂದರ್ಭಿಕ ಚಿತ್ರ: ಎಎಫ್‌ಪಿ
ಸಾಂದರ್ಭಿಕ ಚಿತ್ರ: ಎಎಫ್‌ಪಿ   

ಇಸ್ಲಾಮಾಬಾದ್: ರಾವಲ್ಪಿಂಡಿಯಲ್ಲಿ ನವೀಕರಣಗೊಳ್ಳುತ್ತಿರುವ 100 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯದ ಮೇಲೆ ಅಪರಿಚಿತರ ಗುಂಪೊಂದು ದಾಳಿ ನಡೆಸಿದ್ದು, ಈ ಸಂಬಂಧ ದೂರು ದಾಖಲಾಗಿದೆ.

ಶನಿವಾರ ರಾತ್ರಿ 7.30 ರ ಸುಮಾರಿಗೆ ನಗರದ ಪುರಾನಾಕಿಲ ಪ್ರದೇಶದಲ್ಲಿರುವ ದೇವಾಲಯಕ್ಕೆ ನುಗ್ಗಿದ 10 ರಿಂದ 15 ಜನರಿದ್ದ ಗುಂಪು ದೇವಾಲಯದ ಮುಖ್ಯ ಬಾಗಿಲು ಮತ್ತು ಮೇಲಿನ ಮಹಡಿಯಲ್ಲಿರುವ ಮತ್ತೊಂದು ಬಾಗಿಲು ಮತ್ತು ಮೆಟ್ಟಿಲುಗಳಿಗೆ ಹಾನಿ ಮಾಡಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಕಳೆದೊಂದು ತಿಂಗಳಿಂದ ಇಲ್ಲಿ ದೇವಾಲಯದ ನವೀಕರಣ ಕಾರ್ಯಗಳು ನಡೆಯುತ್ತಿದ್ದು, ಈ ಸಂದರ್ಭ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ಉತ್ತರ ವಲಯದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ನ ಭದ್ರತಾ ಅಧಿಕಾರಿ ಸೈಯದ್ ರಾಜಾ ಅಬ್ಬಾಸ್ ಜೈದಿ ಅವರು ರಾವಲ್ಪಿಂಡಿಯ ಬನ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ADVERTISEMENT

ಮಾರ್ಚ್ 24 ರಂದು ದೇವಾಲಯದ ಮುಂಭಾಗದಲ್ಲಿ ಒತ್ತುವರಿ ತೆರವು ಮಾಡಲಾಗಿತ್ತು ಎಂದಿರುವ ಅವರು, ಈ ದಾಳಿಯಲ್ಲಿ ಆ ಅತಿಕ್ರಮಣಕಾರರ ಕೈವಾಡದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ದಾಳಿ ನಡೆದಾಗ ದೇಗುಲದಲ್ಲಿ ಯಾವುದೇ ವಿಗ್ರಹ ಅಥವಾ ಪೂಜಾ ಸಾಮಗ್ರಿಗಳು ಇರಲಿಲ್ಲ. ಆದರೆ, ದೇವಾಲಯ ಮತ್ತು ಅದರ ಪಾವಿತ್ರ್ಯಕ್ಕೆ ಹಾನಿ ಮಾಡಿದ ದಾಳಿಕೋರರ ವಿರುದ್ಧ ಕ್ರಮಕ್ಕೆ ಸೈಯದ್ ಒತ್ತಾಯಿಸಿದ್ದಾರೆ.

ಈ ಮೊದಲು, ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದ ಕೆಲ ಭೂಮಾಫಿಯಾದವರು ಇಲ್ಲಿ ಅಂಗಡಿಗಳು ಮತ್ತು ಗೂಡಂಗಡಿಗಳನ್ನು ಕಟ್ಟಿಕೊಂಡಿದ್ದರು..

ಇತ್ತೀಚೆಗೆ ಪೊಲೀಸರ ನೆರವಿನೊಂದಿಗೆ ಜಿಲ್ಲಾಡಳಿತ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಿತ್ತು. ಬಳಿಕ, ನವೀಕರಣ ಕಾರ್ಯ ಆರಂಭಿಸಲಾಗಿತ್ತು.

ದೇವಾಲಯದ ಮೇಲೆ ದಾಳಿ ಆಗಿರುವುದನ್ನು ಖಚಿತಪಡಿಸಿರುವ ಆಡಳಿತಾಧಿಕಾರಿ ಓಂ ಪ್ರಕಾಶ್, ಮಾಹಿತಿ ಬಂದ ಕೂಡಲೇ ರಾವಲ್ಪಿಂಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ಹೇಳಿದ್ದಾರೆ.

ಭದ್ರತೆಗಾಗಿ ತಮ್ಮ ಮನೆ ಮತ್ತು ದೇವಸ್ಥಾನದ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಓಂ ಪ್ರಕಾಶ್ ಹೇಳಿದ್ದಾರೆ. ಭದ್ರತೆ ಇದ್ದರೂ ಸಹ ಈ ಬಾರಿ ದೇವಾಲಯದಲ್ಲಿ ಹೋಳಿ ಆಚರಣೆಗಳು ನಡೆಯುವುದಿಲ್ಲ ಎಂದು ಅವರು ತಿಳಿಸಿರುವುದಾಗಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯದವರಾಗಿದ್ದು, ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಸಾಮಾನ್ಯವಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಖೈಬರ್-ಪಖ್ತುಂಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಹಿಂದೂ ದೇಗುಲವೊಂದರ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಗಳ ಗುಂಪೊಂದು ದೇವಾಲಯಕ್ಕೆ ಹಾನಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.