ADVERTISEMENT

ಇಡಾಲಿಯಾ ಚಂಡಮಾರುತ: ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಫ್ಲೊರಿಡಾ ಜನರಿಗೆ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2023, 14:23 IST
Last Updated 30 ಆಗಸ್ಟ್ 2023, 14:23 IST
ಇಡಾಲಿಯಾ ಚಂಡಮಾರುತದಿಂದಾಗಿ ಫ್ಲೊರಿಡಾ ತೀರ ಪ್ರದೇಶದಲ್ಲಿ ನೀರು ನಿಂತಿರುವುದು
ಇಡಾಲಿಯಾ ಚಂಡಮಾರುತದಿಂದಾಗಿ ಫ್ಲೊರಿಡಾ ತೀರ ಪ್ರದೇಶದಲ್ಲಿ ನೀರು ನಿಂತಿರುವುದು   ರಾಯಿಟರ್ಸ್‌ ಚಿತ್ರ

ಫ್ಲೊರಿಡಾ: ಇಡಾಲಿಯಾ ಚಂಡಮಾರುತ ವೇಗ ಪಡೆದುಕೊಂಡಿದ್ದು, ಫ್ಲೊರಿಡಾದ ಬಿಗ್‌ ಬೆಂಡ್‌ ಪ್ರಾಂತ್ಯದತ್ತ ಚಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕರಾವಳಿ ಪ್ರದೇಶದ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ.

'ಇದು (ಇಡಾಲಿಯಾ) ಅತ್ಯಂತ ಪ್ರಬಲವಾಗಿದೆ. ನೀವು ಸುರಕ್ಷಿತ ಸ್ಥಳಗಳಲ್ಲಿ ಇದ್ದರೆ, ಚಂಡಮಾರುತ ಹಾದು ಹೋಗುವವರೆಗೆ ಅಲ್ಲಿಯೇ ಇರಿ. ಸಾಹಸಮಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದುಕೊಳ್ಳದಿರಿ' ಎಂದು ಫ್ಲೊರಿಡಾ ಗೌವರ್ನರ್‌ ರಾನ್‌ ಡೆಸೆಂಟಿಸ್‌ ಎಚ್ಚರಿಕೆ ನೀಡಿದ್ದಾರೆ.

ಇಡಾಲಿಯಾ ಚಂಡಮಾರುತ ಫ್ಲೊರಿಡಾ ತೀರಕ್ಕೆ ಅಪ್ಪಳಿಸಿದರೆ, ತೀರ ಪ್ರದೇಶದಲ್ಲಿ ಅಪಾರ ನಷ್ಟ ಸಂಭವಿಸಲಿದೆ. ಭೂಕುಸಿತವಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಗಂಟೆಗೆ ಗರಿಷ್ಠ 215 ಕಿ.ಮೀ ಇರಲಿದೆ. ಚಂಡಮಾರುತವು ಫ್ಲೊರಿಡಾದಿಂದ ಜಾರ್ಜಿಯಾ ತೀರ ಅಥವಾ ಸೌತ್‌ ಕರೊಲಿನಾದತ್ತ ಸಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಚಂಡಮಾರುತ ಫ್ಲೊರಿಡಾದಿಂದ ಹಾದುಹೋದ ಬಳಿಕ ಕಾರ್ಯಾಚರಣೆ ನಡೆಸಲು 5,500 ಮಂದಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಹಾಗೂ ವಿದ್ಯುತ್ ಇಲಾಖೆಯ 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಸಜ್ಜಾಗಿ ಇರಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.