ADVERTISEMENT

ಭಾರತದೊಂದಿಗೆ ಸಾಂಪ್ರದಾಯಿಕ ಯುದ್ಧವಾದರೆ ಪಾಕ್‌ ಸೋಲುವ ಸಾಧ್ಯತೆ: ಇಮ್ರಾ‌ನ್ ಖಾನ್

ಕಾಶ್ಮೀರ ವಿಚಾರದಲ್ಲಿ ಯುದ್ಧ ನಡೆಯುವ ಸಾಧ್ಯತೆಯಿದೆ ಎಂದ ಪಾಕಿಸ್ತಾನ ಪ್ರಧಾನಿ

ಏಜೆನ್ಸೀಸ್
Published 15 ಸೆಪ್ಟೆಂಬರ್ 2019, 11:11 IST
Last Updated 15 ಸೆಪ್ಟೆಂಬರ್ 2019, 11:11 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್‌: ‘ಭಾರತದೊಂದಿಗೆ ಸಾಂಪ್ರದಾಯಿಕ ಯುದ್ಧವಾದರೆ ಪಾಕಿಸ್ತಾನ ಸೋಲುವ ಸಾಧ್ಯತೆ ಇದೆ. ಆದರೆ ಕೊನೆ ಉಸಿರಿರುವ ತನಕ ಹೋರಾಟ ಮಾಡಲಿದೆ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಅಲ್‌ ಜಝೀರಾ ಸುದ್ದಿತಾಣಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಕಾಶ್ಮೀರ ವಿಚಾರದಲ್ಲಿ ಭಾರತದ ಜತೆ ಸಾಂಪ್ರದಾಯಿಕ ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

‘ನಾನು ಯುದ್ಧವನ್ನು ವಿರೋಧಿಸುವ, ಶಾಂತಿಪ್ರಿಯ ವ್ಯಕ್ತಿ. ಯುದ್ಧದಿಂದ ಯಾವ ಸಮಸ್ಯೆಯನ್ನೂ ಪರಿಹರಿಸಲು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆ. ಆದ್ದರಿಂದ ನಾವಾಗಿಯೇ ಯುದ್ಧವನ್ನು ಆರಂಭಿಸುವುದಿಲ್ಲ. ಆದರೆ ಅಣ್ವಸ್ತ್ರಹೊಂದಿರುವ ಎರಡು ರಾಷ್ಟ್ರಗಳು ಸಾಂಪ್ರದಾಯಿಕ ಯುದ್ಧ ನಡೆಸಿದರೆ, ಅಣ್ವಸ್ತ್ರ ಬಳಕೆಯಲ್ಲೇ ಅದು ಕೊನೆಗೊಳ್ಳುವ ಅಪಾಯವಿದೆ. ಯುದ್ಧದಲ್ಲಿ ಪಾಕಿಸ್ತಾನ ಸೋಲಬಹುದು. ಆದರೆ, ಪಾಕಿಸ್ತಾನದ ಮುಂದೆ ಯುದ್ಧಮಾಡುವ ಅಥವಾ ಶರಣಾಗುವ ಎರಡೇ ಆಯ್ಕೆಗಳನ್ನು ನೀಡಿದರೆ, ಕೊನೆಯ ಉಸಿರಿರುವವರೆಗೂ ಹೋರಾಡಲಿದೆ‘ ಎಂದು ಇಮ್ರಾನ್ ಹೇಳಿದ್ದಾರೆ.

ADVERTISEMENT

‘ಜಮ್ಮು ಕಾಶ್ಮೀರ ವಿಚಾರವಾಗಿ ಭಾರತದ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದೂ ಅವರು ಪುನರುಚ್ಚರಿಸಿದ್ದಾರೆ.

‘ಕಾಶ್ಮೀರ ವಿಚಾರವಾಗಿ ನಾವು ವಿಶ್ವ ಸಂಸ್ಥೆಯನ್ನು ಸಂಪರ್ಕಿಸಿದ್ದೇವೆ. ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ವೇದಿಕೆಗಳಲ್ಲೂ ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ. ಈ ವಿಚಾರವಾಗಿ ಭಾರತದೊಂದಿಗೆ ಸಾಂಪ್ರದಾಯಿಕ ಯುದ್ಧ ನಡೆಯುವ ಸಾಧ್ಯತೆಯೂ ಇದೆ. ಆದರ ಪರಿಣಾಮ ಇತರ ರಾಷ್ಟ್ರಗಳ ಮೇಲೂ ಆಗುವುದು ಖಚಿತ. ಆದ್ದರಿಂದ ಅಂತರರಾಷ್ಟ್ರೀಯ ವೇದಿಕೆಗಳು ಶೀಘ್ರದಲ್ಲೇ ಭಾರತದ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

‘ನಾವು ಇತ್ತೀಚಿನವರೆಗೂ ಭಾರತದ ಜೊತೆ ಮಾತುಕತೆಗೆ ಪ್ರಯತ್ನಿಸಿದ್ದೆವು. ಆದರೆ ಅವರು ಹಣಕಾಸು ಕಾರ್ಯಪಡೆಯಲ್ಲಿ (ಎಫ್‌ಎಟಿಎ) ನಮ್ಮನ್ನು ಕಪ್ಪುಪಟ್ಟಿಗೆ ಸೇರಿಸಲು ಪ್ರಯತ್ನಿಸಿದರು. ಒಂದುವೇಳೆ ಅದು ಸಾಧ್ಯವಾದರೆ ಪಾಕಿಸ್ತಾನದ ಮೇಲೆ ಹಲವು ನಿಷೇಧಗಳನ್ನು ಹೇರಲಾಗುವುದು. ನಮ್ಮ ಅರ್ಥ ವ್ಯವಸ್ಥೆ ಬುಡಮೇಲಾಗುತ್ತದೆ. ಭಾರತವು ಇಂಥ ಪ್ರಯತ್ನವನ್ನು ಆರಂಭಿಸುತ್ತಿದ್ದಂತೆಯೇ ನಾವು ಮಾತುಕತೆಯ ಆಯ್ಕೆಯನ್ನು ರದ್ದುಪಡಿಸಿದೆವು. ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರವಂತೂ ಮಾತುಕತೆಯ ಎಲ್ಲ ಬಾಗಿಲುಗಳೂ ಮುಚ್ಚಿದವು ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.