ADVERTISEMENT

ಪೆಂಟಗಾನ್‌ಗೆ ಭೇಟಿ: ಸೇನೆಯಲ್ಲಿ ಕಪ್ಪು ಅಮೆರಿಕನ್ನರ ಸೇವೆಗೆ ಬೈಡನ್‌ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 7:20 IST
Last Updated 11 ಫೆಬ್ರುವರಿ 2021, 7:20 IST
ಪೆಂಟಗಾನ್‌ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌. ಉಪಾಧ್ಯಕ್ಷ ಕಮಲಾ ಹ್ಯಾರಿಸ್‌, ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಇದ್ದರು   ಎಎಫ್‌ಪಿ ಚಿತ್ರ
ಪೆಂಟಗಾನ್‌ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್‌. ಉಪಾಧ್ಯಕ್ಷ ಕಮಲಾ ಹ್ಯಾರಿಸ್‌, ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಇದ್ದರು   ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಪೆಂಟಗಾನ್‌ಗೆ ಭೇಟಿ ನೀಡಿದ ಜೋ ಬೈಡನ್‌, ಸೇನೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

‘ಅಮೆರಿಕಕ್ಕಾಗಿ ಕಪ್ಪು ವರ್ಣೀಯರು ಹೋರಾಟ ನಡೆಸಿದ ಬಗ್ಗೆ ಸುದೀರ್ಘ ಇತಿಹಾಸವಿದೆ. ಅವರ ಕೊಡುಗೆಯನ್ನು ಎಲ್ಲ ಸಂದರ್ಭಗಳಲ್ಲೂ ಸರಿಯಾಗಿ ಗುರುತಿಸಿ ಗೌರವಿಸದಿದ್ದರೂ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ’ ಎಂದು ಬೈಡನ್‌ ಶ್ಲಾಘಿಸಿದರು.

‘ಹಿಂದಿನಿಂದಲೂ ಸೇನೆಯಲ್ಲಿ ವೈವಿಧ್ಯತೆ ಇದೆ. ರಕ್ಷಣಾ ಕಾರ್ಯದರ್ಶಿ ಹುದ್ದೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಈಗಲೂ ವೈವಿಧ್ಯತೆಯನ್ನು ಕಾಣುತ್ತಿದ್ದೇವೆ’ ಎಂದು ಬೈಡನ್‌ ತಿಳಿಸಿದ್ದಾರೆ.

ADVERTISEMENT

ತೃತೀಯ ಲಿಂಗಿಗಳಿಗೆ ಇದ್ದ ನಿಷೇಧವನ್ನು ತೆಗೆದುಹಾಕಿರುವುದನ್ನು ಪ್ರಸ್ತಾಪಿಸಿದ ಅವರು, ‘ಯಾವುದೇ ಧರ್ಮ, ಲಿಂಗ, ವರ್ಣ ಇರಲಿ. ಪ್ರತಿಯೊಬ್ಬರ ಸುರಕ್ಷತೆ ಮುಖ್ಯ ಮತ್ತು ಅವರ ಕೊಡುಗೆಯನ್ನು ಗೌರವಿಸಬೇಕು’ ಎಂದು ಹೇಳಿದ್ದಾರೆ.

ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ಸೇನೆಯಲ್ಲಿ ಶ್ವೇತ ವರ್ಣಿಯರ ಪ್ರಾಬಲ್ಯ ಹೆಚ್ಚಾಗಿರುವ ವಿಷಯ ಚರ್ಚೆಗೆ ಗ್ರಾಸವಾಗಿರುವುದರಿಂದ ಅಧ್ಯಕ್ಷ ಬೈಡನ್‌ ಅವರ ಈ ಭೇಟಿಯು ಮಹತ್ವ ಪಡೆದಿತ್ತು.

ಸೇನೆಯಲ್ಲಿರುವ 41 ಅತ್ಯಂತ ಹಿರಿಯ ಕಮಾಂಡರ್‌ಗಳಲ್ಲಿ ನಾಲ್ಕು ಸ್ಟಾರ್‌ ರ‍್ಯಾಂಕ್‌ ಹೊಂದಿರುವವರು ಇಬ್ಬರು ಮಾತ್ರ ಇದ್ದಾರೆ. ವಾಯು ಪಡೆಯ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಚಾರ್ಲ್ಸ್‌ ಬ್ರೌನ್‌ ಮತ್ತು ಸೇನಾ ಪಡೆಗಳ ಕಮಾಂಡ್‌ ಆಗಿರುವ ಜನರಲ್‌ ಮೈಕಲ್‌ ಗ್ಯಾರೆಟ್‌ ಕಪ್ಪು ವರ್ಣಿಯರು ಎನ್ನುವುದು ಸಹ ಚರ್ಚೆಯ ವಿಷಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.