ADVERTISEMENT

ಭಾರತದಲ್ಲಿ ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಿದರೆ ಇತರ ದೇಶಗಳಿಗೂ ಅನುಕೂಲ: ಅಮೆರಿಕ

ಪಿಟಿಐ
Published 4 ಜೂನ್ 2021, 8:31 IST
Last Updated 4 ಜೂನ್ 2021, 8:31 IST
ನೆಡ್ ಪ್ರೈಸ್
ನೆಡ್ ಪ್ರೈಸ್   

ವಾಷಿಂಗ್ಟನ್‌: ಭಾರತದಲ್ಲಿ ಕೋವಿಡ್‌–19 ಲಸಿಕೆಗಳ ಉತ್ಪಾದನೆಯ ಸಾಮರ್ಥ್ಯ ಹೆಚ್ಚಾದರೆ, ಆ ದೇಶಕ್ಕೆ ತನ್ನ ಗಡಿಯಾಚೆಗೂ ‘ಮಹತ್ವದ ಬದಲಾವಣೆಯ ಹರಿಕಾರ‘ನಾಗುವ ಸಾಮರ್ಥ್ಯ ದೊರಕಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್‌ ಪ್ರೈಸ್ ಅಭಿಪ್ರಾಯಪಟ್ಟಿದ್ದಾರೆ.

‘ಕೋವಿಡ್‌ ಎರಡನೇ ಅಲೆಯಿಂದ ಭಾರತ ತೀವ್ರವಾಗಿ ನಲುಗಿದೆ. ಹಾಗಾಗಿಯೇ, ಭಾರತ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು ಎಂಬುದರ ಬಗ್ಗೆ ನಾವು ಗಮನಹರಿಸಿದ್ದೇವೆ‘ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಭಾರತದಲ್ಲಿ ಲಸಿಕೆಯ ಉತ್ಪಾದನಾ ಸಾಮರ್ಥ್ಯ ಹೆಚ್ಚಾದರೆ, ಈ ದೇಶ ತನ್ನ ದೇಶವನ್ನೂ ಮೀರಿ ಇತರೆಡೆಯಲ್ಲೂ ಮಹತ್ವದ ಬದಲಾವಣೆ ಉಂಟುಮಾಡುವ ಸಾಮರ್ಥ್ಯ ದೊರಕುತ್ತದೆ. ಇದೇ ಕಾರಣಕ್ಕಾಗಿ ‘ಕ್ವಾಡ್‌‘ ಸಭೆಯಲ್ಲಿ ಭಾರತದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಳದ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗಿತ್ತು‘ ಎಂದು ಹೇಳಿದರು.

ADVERTISEMENT

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕದ ನಾಯಕರನ್ನು ಒಳಗೊಂಡ ಮೊದಲ ವರ್ಚುವಲ್ ‘ಕ್ವಾಡ್‘ ಶೃಂಗಸಭೆಯಲ್ಲಿ, ಭಾರತದ ಕೋವಿಡ್‌ – 18 ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಲಾಗಿತ್ತು.

ಇಲ್ಲಿವರೆಗೆ ಅಮೆರಿಕ ಭಾರತದ ಕೋವಿಡ್‌ ಬಿಕ್ಕಟ್ಟಿನ ಹೋರಾಟಕ್ಕೆ ಕೊಡುಗೆಯಾಗಿ₹3,650 ಕೋಟಿಯಷ್ಟು (500 ದಶಲಕ್ಷ ಡಾಲರ್) ಹಣಕಾಸು ನೆರವು ನೀಡಿದೆ. ಇದರಲ್ಲಿ ಅಮೆರಿಕ ಸರ್ಕಾರದಿಂದಲೇ ₹730 ಕೋಟಿ (100 ದಶಲಕ್ಷ ಡಾಲರ್‌) ಸೇರಿದೆ ಎಂದು ಅವರು ತಿಳಿಸಿದರು.

ಈ ಮಧ್ಯೆ,ಬೈಡನ್ ಆಡಳಿತವು ಅಮೆರಿಕದ 2.5 ಕೋಟಿ ಲಸಿಕೆಗಳನ್ನು ಭಾರತ ಸೇರಿದಂತೆ ಇತರ ದೇಶಗಳಿಗೆ ಕಳುಹಿಸುವುದಾಗಿ ಗುರುವಾರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.